ಬೆಂಗಳೂರು : ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂ ಖರೀದಿಸಿ ಕೃಷಿ ಜಮೀನು ಒದಗಿಸುವ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ. ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಗಳಿಂದ ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆಗೆ ಸಂಬಂಧಿಸಿದಂತೆ, ಸರ್ಕಾರದ ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ ಇಲಾಖೆ) ವಿವಿಧ ತರಹದ ಜಮೀನುಗಳಿಗೆ ಮಾರ್ಗಸೂಚಿ ಬೆಲೆಯನ್ನು ನಿರ್ಧರಿಸಿ ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳನ್ನು ಅನುಸರಿಸಿ ಪ್ರತಿ ಎಕರೆಗೆ ಮಾರ್ಗಸೂಚಿ ದರ ದಂತೆ ಭೂ ಒಡೆತನ ಯೋಜನೆಯಡಿಯಲ್ಲಿ ಖರೀದಿಸಲು ಅನುಮೋದನೆ ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಆದೇಶಿಸಿದೆ. ಸದರಿ ಯೋಜನೆಯಡಿ ಫಲಾಪೇಕ್ಷಿಗಳಿಗೆ ಭೂಮಿ ಒದಗಿಸುವ ಸಂಬಂಧ ಪಡೆಯಬೇಕಾದ ವಿವಿಧ ದಾಖಲೆಗಳನ್ನು ಕ್ರೋಡೀಕರಿಸುವುದರಲ್ಲಿ ವಿಳಂಬವಾಗುತ್ತಿದ್ದು ಇದರಿಂದಾಗಿ ಫಲಾಪೇಕ್ಷಿಗಳಿಗೆ ತ್ವರಿತವಾಗಿ ಯೋಜನೆಯ ಸೌಲಭ್ಯಗಳನ್ನು ನೀಡಲು ಸಾದ್ಯವಾಗದ ಕಾರಣ, ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸೂಕ್ತ ಆದೇಶ ಹೊರಡಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿ ಕೋರಿರುತ್ತಾರೆ. ಮೇಲ್ಕಂಡ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ವಿವಿಧ ನಿಗಮ/ಅಲೆಮಾರಿ ಕೋಶಗಳ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆಯಡಿ ಭೂಮಿಯನ್ನು ಒದಗಿಸುವ ಸಂಬಂಧ ಪಡೆಯಬೇಕಾದ ವಿವಿಧ ದಾಖಲೆಗಳನ್ನು ಹಾಗೂ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಈ ಕೆಳಕಂಡ ಮಾರ್ಗಸೂಚಿ / ನಿಬಂಧನೆಗಳನ್ನು ಅನುಸರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ.