ಸಿಂದಗಿ: ವಕ್ಫ್ ಬೋರ್ಡ್ ಕಬಳಿಸಿದ್ದ ಸಿಂದಗಿಯ ಗುರುಬಸವ ವಿರಕ್ತಮಠದ ಕೊಟ್ಯಂತರ ರೂ. ಬೆಲೆ ಬಾಳುವ 1.30 ಎಕರೆ ಆಸ್ತಿ ಸತತ 51 ವರ್ಷಗಳ ಹೋರಾಟದ ಫಲವಾಗಿ ವಾಪಸ್ ಮಠಕ್ಕೆ ಮರಳಿದೆ. ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿರುವ ಗುರುಬಸವ ವಿರಕ್ತಮಠದ ಸುತ್ತಲಿನ 1.30 ಎಕರೆ 1974ರಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಾಗಿತ್ತು. ಇದು ಅನಧಿಕೃತವಾಗಿದೆ ಎಂದು ಅರಿತ ಭಕ್ತರು ಅಂದಿನಿಂದ ಹೋರಾಟ ನಡೆಸುತ್ತಲೇ ಬಂದಿದ್ದರು. ಅಲ್ಲದೇ ಈ ಕುರಿತು ಹಲವು ಬಾರಿ ಪ್ರತಿಭಟನೆ ಕೂಡ ನಡೆಸಿದ್ದರು. 2024ರಲ್ಲಿ ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಭುಗಿಲೆದ್ದ ವೇಳೆ ಗುರುಬಸವ ಚನ್ನಬಸವ ಶ್ರೀಗಳ ಮಾರ್ಗದರ್ಶನದಲ್ಲಿ ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕೂಡ ಹೋರಾಟ ನಡೆಸಿತ್ತು. ಜಿಲ್ಲಾಡಳಿತ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮಠದ 600 ವರ್ಷಗಳ ಇತಿಹಾಸದ ದಾಖಲೆ ನೀಡಲಾಗಿತ್ತು. ಜಿಲ್ಲಾಡಳಿತ ಬಳಿಕ 2024ರಲ್ಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. 11 ತಿಂಗಳ ಕಾಲ ನಡೆದ ವಾದ-ವಿವಾದದ ಬಳಿಕ ನ.28ರಂದು ನ್ಯಾಯಾಲಯ ಆಸ್ತಿಯನ್ನು ಮಠಕ್ಕೆ ವಾಪಸ್ ನೀಡಿ ಆದೇಶಿಸಿದೆ. ಅಲ್ಲದೇ ಮಠದ ಆಸ್ತಿಗೂ ವಕ್ಫ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ತೀರ್ಪು ನೀಡಿದೆ ಎಂದು ಗುರುಬಸವ ವಿರಕ್ತಮಠದ ಸೇವಾ ಸಮಿತಿ ಕಾರ್ಯದರ್ಶಿ ನಿಂಗಪ್ಪ್ಪ ಪಟ್ಟಣಶೆಟ್ಟಿ ತಿಳಿಸಿದ್ದಾರೆ.