ಬೀದರ್ : ರೈತರ ಜಮೀನು ಹಸಿರಾಗಿಸುವ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಉದ್ಘಾಟನೆಯಾಗಿ 12 ವರ್ಷ ಉರಳಿದರೂ ಬ್ಯಾರೇಜ್ನಲ್ಲಿ ನೀರು ನಿಲ್ಲುತ್ತಿಲ್ಲ. ಇದು ಬೃಹತ್ ನೀರಾವರಿಯ ಕನಸು ಕಂಡಿದ್ದ ರೈತರಿಗೆ ಬಿಗ್ ಶಾಕ್ ನೀಡಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಫಲವಾದಂತಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಗೆ ನೀರಾವರಿ ಕಲ್ಪಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ 60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಈ ಬ್ಯಾರೇಜ್ ನಿರ್ಮಾಣವಾಗಿ, ಲೋಕಾರ್ಪಣೆಗೊಂಡು 12 ವರ್ಷಗಳು ಉರುಳಿದರೂ ಈ ಬ್ಯಾರೇಜ್ ನೀರಿನಿಂದ ರೈತರು ಒಂದೇ ಒಂದು ಎಕರೆಯಷ್ಟು ನೀರಾವರಿ ಮಾಡಿಕೊಂಡಿಲ್ಲ. ಇದು ಸಹಜವಾಗಿಯೇ ಚಂದಾಪುರ, ಬಾಬಳಿ, ಮಣಿಗೆಂಪುರ, ಗೋರನಾಳದ ರೈತರ ನೀರಾವರಿ ಕನಸು ನುಚ್ಚು ನೂರಾದಂತಾಗಿದೆ. ಬ್ಯಾರೇಜ್ ನಿರ್ಮಾಣವಾಗುತ್ತಿದಂತೆ ನೀರು ನಿಲ್ಲುತ್ತದೆ ಎಂದು ನೂರಾರು ರೈತರು ತಮ್ಮ ಹೊಲಗಳಲ್ಲಿ ಸಾಲ ಮಾಡಿ ಪೈಪ್ಲೈನ್ ಹಾಕಿಸಿಕೊಂಡು ಕುಳಿತಿದ್ದಾರೆ. ಆದರೆ ಬ್ಯಾರೇಜ್ನಲ್ಲಿ ಮಾತ್ರ ನೀರು ನಿಲ್ಲುತ್ತಿಲ್ಲ. ಇದು ಸಹಜವಾಗಿಯೇ ಸರ್ಕಾರದ ವಿರುದ್ಧ ರೈತರು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಇಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವುದಕ್ಕೆ ಶುರು ಮಾಡಿದಾಗ ಇಲ್ಲಿನ ರೈತರು ಖುಷಿಯಾಗಿದ್ದು, ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಬಹು ಅಂದುಕೊಂಡಿದ್ದರು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ, ಉದ್ಘಾಟನೆಯಾಗಿ 12 ವರ್ಷ ಕಳೆದರೂ ಈ ಡ್ಯಾಂನಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಮಳೆಯಾಶ್ರಿತ ಬೆಳೆಯನ್ನ ಬೆಳೆದು ರೈತರು ಬದುಕು ಕಟ್ಟಿಕೊಳ್ಳಬೇಕಾಗಿದ್ದು, ಈ ಬ್ಯಾರೇಜ್ನಿಂದ ಏನು ಪ್ರಯೋಜನವಾಗಿಲ್ಲ ರೈತರು ಹೇಳುತ್ತಾರೆ.
ಚಂದಾಪುರ ಗ್ರಾಮದ ಬಳಿ ಮಾಂಜ್ರಾ ನದಿಯೂ ಹರಿದು ಹೋಗುತ್ತದೆ. ಈ ನದಿಯೂ ಮಳೆಗಾಲದಲ್ಲಿ ಮೈದುಂಬಿಕೊಂಡು ಹರಿದು ಪಕ್ಕದ ರಾಜ್ಯ ತೆಲಂಗಾಣಕ್ಕೆ ನೀರು ಹರಿದು ಹೋಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಇಲ್ಲಿ ನೀರು ಸಂಗ್ರಹಿಸಿ ಬೆಸಿಗೆಯಲ್ಲಿ ಇಲ್ಲಿನ ನೀರನ್ನ ಸುತ್ತಮುತ್ತಲಿನ ಹತ್ತಾರು ಗ್ರಾಮಕ್ಕೆ ಕುಡಿಯಲು ಹಾಗೂ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶವಾಗಿತ್ತು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ 12 ವರ್ಷಗಳು ಉರುಳುತ್ತಾ ಬಂದರೂ ಇಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ. ಮಳೆಗಾಲದಲ್ಲೂ ನೀರು ವ್ಯರ್ಥವಾಗಿ ಹರಿದು ತೆಲಂಗಾಣ ಸೇರುತ್ತಿದೆಯೇ ವಿನಹಃ ಈ ಬ್ಯಾರೇಜ್ ಇದ್ದು ಇಲ್ಲದಂತಾಗಿದೆ ಎಂದು ಇಲ್ಲಿನ ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷದಿಂದ ಈ ಬ್ಯಾರೇಜ್ಗೆ ಅಳವಡಿಸಲಾಗಿದ್ದ ಗೇಟ್ಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿದ್ದು, ನೀರು ಸೋರಿಕೆಯಾಗಿ ನೀರಿನ ರಭಸಕ್ಕೆ ಗೇಟ್ಗಳು ಕಿತ್ತುಕೊಂಡು ಹೋಗಿವೆ. ಈ ಬ್ಯಾರೇಜ್ ನಿರ್ಮಾಣದ ಸಮಯದಲ್ಲಿ ನೂರಾರು ಎಕರೆ ಜಮೀನು ಕೂಡ ಹೋಗಿದೆ. ಆದರೆ ಈವರೆಗೂ ರೈತರಿಗೆ ಸಿಗಬೇಕಾಗ ಪರಿಹಾರ ಸಿಕ್ಕಿಲ್ಲ. ಇತ್ತ ಜಮೀನು ಇಲ್ಲ, ಮೊತ್ತೊಂದು ಕಡೆಗೆ ಜಮೀನಿಗೆ ನೀರು ಇಲ್ಲ. ಹೀಗಾಗಿ ರೈತರು ಸರಕಾರ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರೈತರಿಗೆ ಅನೂಕೂಲವಾಗಲಿ ಎಂದು ಸರಕಾರ ಕೊಟ್ಯಂತರ ರೂ. ಸುರಿದು ಬ್ಯಾರೇಜ್ ನಿರ್ಮಾಣ ಮಾಡಿದೆ.