image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸರಕಾರಿ ನೌಕರರಿಗೆ ಸಂಬಳಕ್ಕಿಲ್ಲ ಹಣ : ಸರ್ಕಾರದ ಗ್ಯಾರಂಟಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

ಸರಕಾರಿ ನೌಕರರಿಗೆ ಸಂಬಳಕ್ಕಿಲ್ಲ ಹಣ : ಸರ್ಕಾರದ ಗ್ಯಾರಂಟಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

ಹುಬ್ಬಳ್ಳಿ-ಧಾರವಾಡ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಾದ ಉಚಿತ ಬಸ್ ಪ್ರಯಾಣ ಮತ್ತು ಜನೌಷಧಿ ಕೇಂದ್ರಗಳ ಎತ್ತಂಗಡಿ ಕುರಿತಂತೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಐತಿಹಾಸಿಕ ಹಾಗೂ ಕಟುವಾದ ಆದೇಶವನ್ನು ನೀಡಿದೆ. ಬಸ್‌ ಪ್ರಯಾಣ ಉಚಿತ ಕೊಡಲು ನಿಮಗೆ ಕೇಳಿದ್ದವರು ಯಾರು? ಸರ್ಕಾರಿ ನೌಕರರಿಗೆ ಸಂಬಳ ಕೊಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ ಎಂದು ನ್ಯಾಯಪೀಠವು ಸರ್ಕಾರದ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧ ಕೇಂದ್ರಗಳನ್ನು ತೆರವುಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ ನಿರ್ವಹಣೆಯ ಕುರಿತು ಮೌಖಿಕವಾಗಿ ಚಾಟಿ ಬೀಸಿದೆ.

ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಸಾರ್ವಜನಿಕರು ಯಾರಾದರೂ ಸರ್ಕಾರಕ್ಕೆ ಅರ್ಜಿ ಹಾಕಿದ್ದರೇ? ಯಾರೂ ಕೇಳದಿದ್ದರೂ ನೀವೇಕೆ ಉಚಿತ ನೀಡುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿತು. ಬೇರೆ ಇಲಾಖೆಗಳಲ್ಲಿ ಹಗಲಿರುಳು ದುಡಿಯುವ ಸರ್ಕಾರಿ ನೌಕರರಿಗೆ ತಿಂಗಳ ಸಂಬಳ ಕೊಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆ ನೌಕರರು ಜೀವನ ನಡೆಸುವುದು ಬೇಡವೇ? ಸರ್ಕಾರದ ಎಲ್ಲ ಹಣವೂ ಕೇವಲ ಉಚಿತ ಕೊಡುಗೆಗಳಿಗೆ ಪೋಲಾಗುತ್ತಿದೆ ಎಂದು ಪೀಠವು ಕಟುವಾಗಿ ನುಡಿಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೌಷಧಿ ಕೇಂದ್ರಗಳು ಬಡವರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿವೆ. ಇದನ್ನು ಸಹಿಸದ ರಾಜ್ಯ ಸರ್ಕಾರ, ಕೇವಲ ರಾಜಕೀಯ ಕಾರಣಕ್ಕಾಗಿ ಆಸ್ಪತ್ರೆ ಆವರಣದಿಂದ ಈ ಕೇಂದ್ರಗಳನ್ನು ಎತ್ತಂಗಡಿ ಮಾಡಿಸಲು ಹೊರಟಿದೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು. ಪ್ರಧಾನ ಮಂತ್ರಿಯವರ ಹೆಸರಿನಲ್ಲಿ ಈ ಯೋಜನೆ ಇದೆ ಎಂಬ ಒಂದೇ ಕಾರಣಕ್ಕೆ ನೀವು ಇದನ್ನು ದ್ವೇಷಿಸುತ್ತಿದ್ದೀರಾ? ಜನರ ಆರೋಗ್ಯದ ವಿಷಯದಲ್ಲಿ ರಾಜಕೀಯ ಸಣ್ಣತನ ಸಲ್ಲದು. ಕೇಂದ್ರದ ಯೋಜನೆಯೋ ಅಥವಾ ರಾಜ್ಯದ ಯೋಜನೆಯೋ, ಅಂತಿಮವಾಗಿ ಅದು ಜನರಿಗೆ ತಲುಪಬೇಕು ಎಂದು ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ.ಎಂ. ಗಂಗಾಧರ ಅವರು, ಜನೌಷಧಿ ಕೇಂದ್ರಗಳಲ್ಲಿ ಹಣ ಪಡೆದು ಔಷಧ ನೀಡಲಾಗುತ್ತದೆ, ಆದರೆ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಸಂಪೂರ್ಣ ಉಚಿತವಾಗಿ ಔಷಧ ನೀಡುತ್ತಿದ್ದೇವೆ. ಹೀಗಾಗಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ ಈ ವಾದವನ್ನು ಒಪ್ಪದ ನ್ಯಾಯಪೀಠ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಬೇಕಾದ ದುಬಾರಿ ಔಷಧಗಳು ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿಗುತ್ತವೆ. ಇದನ್ನು ನಿಲ್ಲಿಸುವುದರಿಂದ ಬಡ ರೋಗಿಗಳಿಗೆ ಅನ್ಯಾಯವಾಗುತ್ತದೆ. ನೀವು ನಿಜವಾಗಿಯೂ ಉಚಿತ ನೀಡಬೇಕಿರುವುದು ಶಿಕ್ಷಣ ಮತ್ತು ಆರೋಗ್ಯವನ್ನೇ ಹೊರತು ಬಸ್ ಪ್ರಯಾಣವನ್ನಲ್ಲ. ಎಲ್ಲದರಲ್ಲೂ ಫ್ರೀ ಸಂಸ್ಕೃತಿ ತರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿತು.

Category
ಕರಾವಳಿ ತರಂಗಿಣಿ