image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹೊಸ ಸಂಚಲನ ಮೂಡಿಸಲು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಸಜ್ಜು

ಹೊಸ ಸಂಚಲನ ಮೂಡಿಸಲು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಸಜ್ಜು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಸಜ್ಜಾಗಿದ್ದಾರೆ. ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತಿರುವ ಜನರಿಗಾಗಿ ತಾವು ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತಿದ್ದು, ಇದು ರಾಜ್ಯದಲ್ಲಿ ನಿರ್ಣಾಯಕ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಘೋಷಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ರಣಕಹಳೆ ಊದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ಪ್ರಬಲ ಶಕ್ತಿಯ ಅಗತ್ಯವಿದೆ. ನಾನು ಜನರಿಗಾಗಿ ಆ ಮೂರನೇ ಶಕ್ತಿಯನ್ನು ಕಟ್ಟಲು ಸಿದ್ಧನಾಗಿದ್ದೇನೆ. ಈ ಸಂಬಂಧ ಮುಂದಿನ ಹಂತದ ನಿರ್ಧಾರಗಳನ್ನು ಕೈಗೊಳ್ಳಲು ಭಾನುವಾರ (ಇಂದು) ಕಲ್ಬುರ್ಗಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಪಕ್ಷದ ರೂಪುರೇಷೆ ಹಾಗೂ ಪಕ್ಷದ ಚಿನ್ಹೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಮ್ಮ ಹೊಸ ಪಕ್ಷದ ಘೋಷಣೆಯೊಂದಿಗೆ ಇಬ್ರಾಹಿಂ ರಾಜಕೀಯ ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನ ಹಲವು ಹಾಲಿ ಶಾಸಕರು ಈಗಾಗಲೇ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಹಲವು ನಾಯಕರು ಕರೆ ಮಾಡಿ, ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಲಿದೆ ಎಂಬ ಸುಳಿವು ನೀಡಿದರು.

ಹೊಸ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟನೆ ನೀಡಿದ ಇಬ್ರಾಹಿಂ, ನಮ್ಮದು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾದ ಪಕ್ಷವಲ್ಲ. ನಾವು ಜಗಜ್ಯೋತಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಅಡಿಯಲ್ಲಿ ಮುನ್ನಡೆಯುತ್ತೇವೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯೇ ನಮ್ಮ ಪಕ್ಷದ ಜೀವಾಳವಾಗಿರುತ್ತದೆ ಎಂದು ಹೇಳಿದರು. ಇದೇ ವೇಳೆ ರಾಷ್ಟ್ರೀಯ ನಾಯಕರ ಸಾಮರ್ಥ್ಯದ ಬಗ್ಗೆಯೂ ಇಬ್ರಾಹಿಂ ಟೀಕಾಪ್ರಹಾರ ನಡೆಸಿದರು. ರಾಹುಲ್ ಗಾಂಧಿಯವರಿಗೆ ಇಂದಿರಾಗಾಂಧಿಯವರ ರಾಜಕೀಯ ಶಕ್ತಿ ಬರಲಿಲ್ಲ, ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವಾಗಲಿ, ಶಕ್ತಿಯಾಗಲಿ ಬರಲಿಲ್ಲ ಎಂದು ವಿಶ್ಲೇಷಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕೇವಲ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಮುಳುಗಿವೆ. ಈ ಅಧಿಕಾರ ಲಾಲಸೆಯ ರಾಜಕಾರಣದಿಂದಾಗಿ ಅಖಂಡ ಕರ್ನಾಟಕ ಮುಂದೊಂದು ದಿನ ಇಬ್ಭಾಗವಾಗುವ ಅಪಾಯವಿದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.

Category
ಕರಾವಳಿ ತರಂಗಿಣಿ