image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ : ಕೃಷ್ಣ ಭೈರೇಗೌಡ

ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ : ಕೃಷ್ಣ ಭೈರೇಗೌಡ

ಬೆಳಗಾವಿ: ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ. ಆದರೆ, ಅವರ ಮೇಲೆ ಸರ್ಕಾರಕ್ಕೆ ಸಹಾನುಭೂತಿ ಇದ್ದು, ಅವರ ಕಲ್ಯಾಣಕ್ಕೆ ಹಾಗೂ ಘನತೆಯ ಜೀವನಕ್ಕೆ ಉದಾರ ಮನಸ್ಸಿನೀಂದ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ವಿಧಾನ ಪರಿಷತ್ನಲ್ಲಿ ಸದಸ್ಯರಾದ ಶಿವಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, "ಪರವಾನಗಿ ಭೂ ಮಾಪಕರನ್ನು ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕಾಗಿ ಸರ್ಕಾರ ನೇಮಕ ಮಾಡಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಸರ್ವೇ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಇಲ್ಲದ ಮೇಲೆ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದು ಹೇಗೆ..?" ಎಂದು ಮರು ಪ್ರಶ್ನೆ ಹಾಕಿದರು. "ಅಸಲಿಗೆ ಇಲಾಖೆಯಲ್ಲಿ 750 ಸರ್ಕಾರಿ ಹುದ್ದೆ ಖಾಲಿ ಇದೆ. ಆದರೆ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಏಕೆಂದರೆ ನಾವು ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಮುಂದಾದರೆ ತುಂಬಾ ಪ್ರಚಲಿತದಲ್ಲಿರುವ ಉಮಾದೇವಿ ಪ್ರಕರಣ ಎದುರಾಗುತ್ತದೆ. ಈ ಪ್ರಕರಣದಲ್ಲಿ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಅಡ್ಡ ಬರುತ್ತದೆ. ಇದಲ್ಲದೆ, ಈ ಹಿಂದೆ ಪರವಾನಗಿ ಭೂ ಮಾಪಕರು ತಮ್ಮನ್ನು ಖಾಯಂಗೊಳಿಸುವಂತೆ ಕೆಐಟಿ ಯಲ್ಲಿ ಅರ್ಜಿ ಹಾಕಿದ್ದರು. ವಾದ-ವಿವಾದ ಆಲಿಸಿದ ಕೆಐಟಿ ಸಹ ಖಾಯಂಗೊಳಿಸಲು ಬರೋದಿಲ್ಲ ಎಂದು ಆ ಮನವಿಯನ್ನೇ ತಿರಸ್ಕಾರ ಮಾಡಿದೆ. ಹೀಗಾಗಿ ಪರವಾನಗಿ ಭೂ ಮಾಪಕರನ್ನು ಖಾಯಂ ನೌಕರರಾಗಿ ನೇಮಕ ಮಾಡುವುದು ಕಾನೂನಿನ ಅಡಿಯಲ್ಲಿ ಅಸಾಧ್ಯ" ಎಂದು ವಿವರಿಸಿದರು.

"ಪರವಾನಗಿ ಭೂ ಮಾಪಕರ ಜೀವನಕ್ಕೂ ಅನುಕೂಲ ಮಾಡಿಕೊಡಬೇಕು ಎಂಬ ಸಹಾನುಭೂತಿ ಸರ್ಕಾರಕ್ಕೆ ಇದೆ. ಇದೇ ಕಾರಣಕ್ಕೆ ಅವರಿಗೆ ದರ್ಖಾಸ್ತು ಪೋಡಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಹಿಂದೆ ಸರ್ವೇ ಮಾಡಿದರೆ ಸರ್ವೇ ಶುಲ್ಕವನ್ನು ರೈತರು ಪಾವತಿಸುತ್ತಿದ್ದರು. ಆದರೆ, ದರ್ಖಾಸ್ತು ಪೋಡಿ ವಿಚಾರದಲ್ಲಿ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಸರ್ವೇ ಕೆಲಸ ಮುಗಿಸಿ ಪೋಡಿ ಮಾಡಿಕೊಡುತ್ತಿರುವ ಕಾರಣ ಅವರಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಮಾಡಿಕೊಡುತ್ತಿದ್ದೇವೆ. ಹೀಗಾಗಿ ಸರ್ಕಾರವೇ ಪರವಾನಗಿ ನೌಕರರಿಗೆ ಆ ಶುಲ್ಕವನ್ನು ನೀಡುತ್ತಿದೆ. ಕೆರೆ ಅಳತೆ ಮಾಡಿದ್ರೂ ಸಹ ಖಾಸಗಿ ಸರ್ವೇಯರ್ಗಳ ಸಂಭಾವನೆಗೆ ಸಮಾಂತರವಾಗಿ ಗೌರವ ಧನ ನೀಡುತ್ತಿದ್ದೇವೆ" ಎಂದು ಮಾಹಿತಿ ನೀಡಿದರು. "ಸರ್ಕಾರಿ ಕೆಲಸ ಮಾಡಿದ್ರೆ ಪರವಾನಗಿ ನೌಕರರಿಗೂ ಸಂಭಾವನೆ ಸಿಗಬೇಕು ಎಂದು ನಿರ್ಧಾರ ಮಾಡಿದ್ದು ಸಹ ನಾವೆ. ಮೊದಲು ಇದಕ್ಕೆ ಪ್ರಾವಿಷನ್ ಇರಲಿಲ್ಲ, ಅವರು ತಮ್ಮ ಕೆಲಸವನ್ನು ಉಚಿತವಾಗಿ ಮಾಡಬೇಕಿತ್ತು. ಆದರೆ, ನಾನು ಕಳೆದ ಏಪ್ರಿಲ್ನಲ್ಲಿ ಲೆಕ್ಕಹಾಕಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಒಂದು ಲಕ್ಷದ ವರೆಗೆ ಹಣ ನೀಡಿದ್ದೇನೆ" ಎಂದು ತಿಳಿಸಿದರು. ಬಾಂದ್ ಜವಾನರ ಬಗ್ಗೆಯೂ ಗಮನ ಸೆಳೆದ ಸಚಿವರು, "ಬಾಂದ್ ಜವಾನರೆಂದರೆ ಹಿಂದನ ಕಾಲದಲ್ಲಿ ಸರ್ವೇಯರ್ ಹಿಂದೆ ಸರ್ವೇ ಸಾಮಗ್ರಿಗಳನ್ನು ಎತ್ತಿಕೊಂಡು ಓಡಾಡುವವರು. ಇದು ಒಪ್ಪುವಂತಹ ಘನತೆಯ ಕೆಲಸ ಅಲ್ಲ. ಕಾಲ ಬದಲಾದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಯಾರೂ ಯಾರಿಗೂ ಜವಾನರಾಗಿ ಬದುಕಬಾರದು. ಆ ಕೆಲಸದ ಹೆಸರೇ ಜವಾನ ಅಂತ, ಇಲ್ಲಿ ಯಾರೂ ಜವಾನರಾಗಿ ಬ್ಯಾಗು ಹೊತ್ಕೋಂಡು ಬಾಗಿಲು ಕಾಯೋ ಜವಾನತನ ಸರಿಯಲ್ಲ. ಹೀಗಾಗಿಯೇ ನಾವು ಇಂದು ಎಲ್ಲಾ ಸರ್ವೇಯರ್ಗಳಿಗೆ ಆಧುನಿಕ ತಂತ್ರಜ್ಞಾನ ನಿರ್ಮಿತ ರೋವರ್ ನೀಡುತ್ತಿದ್ದೇವೆ. ಇದು ಡಿಜಿಟಲ್ ಸರ್ವೇ ಯಂತ್ರೋಪಕರಣವಾಗಿದ್ದು, ಸರ್ವೇ ಕೆಲಸ ಮಾಡುವವರಿಗೂ ಘನತೆ ನೀಡಿದೆ" ಎಂದು ಸಂತಸ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ