ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಕೋಟ್ಯಂತರ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ದಾಖಲಾಗಿರುವ ದೂರಿನ ತನಿಖೆಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವ ಲೋಕಾಯುಕ್ತ ಪೊಲೀಸರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿ ಡಿ.18ರೊಳಗೆ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ತಾಕೀತು ಮಾಡಿತ್ತು. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಮುಂದೆ ಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ತನಿಖೆ ಪ್ರಗತಿ ಮತ್ತು ಅಂತಿಮ ವರದಿ ಸಲ್ಲಿಕೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆಯಿತು. ಈ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯ ಈಗಾಗಲೇ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ, ಇಂದೇ ಬಿ.ರಿಪೋರ್ಟ್ ಕುರಿತು ಆದೇಶ ಹೊರಬರುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇತ್ತು. ಆದರೆ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ನ್ಯಾಯಾಲಯ ಯಾವುದೇ ಅಂತಿಮ ಆದೇಶ ನೀಡದೆ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆಯ ವೇಳೆ ಲೋಕಾಯುಕ್ತ ಪೊಲೀಸ್ ಎಸ್ಪಿ ಉದೇಶ್ ಅವರು ಇವತ್ತಿನವರೆಗೆ ನಡೆದಿರುವ ತನಿಖೆಯ ಪ್ರಗತಿ ವರದಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ, ತನಿಖೆಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ವೆಂಕಟೇಶ ಅರಬಟ್ಟಿ ಅವರು ವರದಿ ಸಲ್ಲಿಸಿ ವಾದ ಮಂಡಿಸಿದರು.
ಎಸ್‌ಪಿಪಿ ವೆಂಕಟೇಶ ಅರಬಟ್ಟಿ ಮಾತನಾಡಿ, ಕೆಲವು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೇಳಲಾಗಿದೆ. ಆದರೆ ಇನ್ನೂ ಅನುಮತಿ ದೊರಕದ ಕಾರಣ ಅಂತಿಮ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಧೀಶರು, "ಕೆಲವು ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿ ಬಾಕಿ ಇದೆ ಎಂದು ವರದಿ ಸಲ್ಲಿಸುತ್ತಿದ್ದೀರಾ. ಹಾಗಾದರೆ ಇದರಲ್ಲಿ ಯಾಕೆ ಅಂತಿಮ ವರದಿ ಸಲ್ಲಿಸಲಾಗಿಲ್ಲ?" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಪಿ, ತನಿಖಾ ವರದಿ ಸಿದ್ಧವಾಗಿದೆ. ಆದರೆ ಪ್ರಾಸಿಕ್ಯೂಷನ್ ಅನುಮತಿ ಸಿಗದ ಹಿನ್ನೆಲೆಯಲ್ಲಿ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರಕರಣದ ಕೇಸ್ ಡೈರಿ ಸಲ್ಲಿಸುವಂತೆ ಎಸ್‌ಪಿಪಿಗೆ ಸೂಚನೆ ನೀಡಿದರು. ಸ್ವಲ್ಪ ಸಮಯ ನೀಡಿದರೆ ಸೀಲ್ಡ್ ಕವರ್‌ನಲ್ಲಿ ವರದಿ ಸಲ್ಲಿಸಲು ಸಿದ್ಧವಿರುವುದಾಗಿ ಎಸ್‌ಪಿಪಿ ಭರವಸೆ ನೀಡಿದರು.
ಲೋಕಾಯುಕ್ತ ಪೊಲೀಸರ ಸ್ಥಿತಿಗತಿ ವರದಿಯ ಪ್ರಕಾರ, ಒಟ್ಟು 11 ಪ್ರಕರಣಗಳಲ್ಲಿ 10 ಪ್ರಕರಣಗಳ ತನಿಖೆ ಇನ್ನೂ ಬಾಕಿಯಿದ್ದು, 11ನೇ ಪ್ರಕರಣವಾದ ದಿನೇಶ್ ಕುಮಾರ್ ಪ್ರಕರಣದಲ್ಲಿ ಮಾತ್ರ ಆರೋಪಪಟ್ಟಿ ಸಿದ್ಧವಾಗಿದೆ. ಆದರೆ ಆ ಆರೋಪಪಟ್ಟಿ ಸಲ್ಲಿಸಲು ಕೂಡ ಪೂರ್ವಾನುಮತಿ ಕೋರಲಾಗಿದೆ. ಕೆಲವು ಪ್ರಕರಣಗಳಲ್ಲಿ ತನಿಖೆ ನಡೆಸಲು ಅಗತ್ಯ ಅನುಮತಿ ಇನ್ನೂ ದೊರಕಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯವು ಡಿ.23ರಂದು ಕೇಸ್ ಡೈರಿ ಪರಿಶೀಲಿಸಿದ ಬಳಿಕ, ಬಿ.ರಿಪೋರ್ಟ್ ಪ್ರಶ್ನಿಸಿರುವ ಅರ್ಜಿಯ ಮೇಲೆ ಆದೇಶ ನೀಡುವುದಾಗಿ ತಿಳಿಸಿದೆ.