ಅಮೇರಿಕ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರು, ಗಡಿಯಾಚೆಗಿನ ಉಗ್ರಗಾಮಿ ಚಟುವಟಿಕೆಗಳ ವಿರುದ್ದ ಭಾರತದ ತೀಕ್ಷ್ಣ ನಿಲುವನ್ನು ಒತ್ತಿ ಹೇಳಿದರು. ಅಲ್ಲದೆ ಕೆಲವು ದೇಶಗಳು ಉಗ್ರವಾದವನ್ನೇ ತಮ್ಮ ದೇಶದ ನೀತಿಯನ್ನಾಗಿಸಿವೆ ಎಂದು ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದರು. "ಭಾರತದ ಜನರಿಂದ ನಮಸ್ಕಾರ" ಎಂದು ಭಾಷಣ ಆರಂಭಿಸಿದ ಜೈಶಂಕರ್ ವಿಶ್ವಸಂಸ್ಥೆಯ ಸ್ಥಾಪಕ ಆದರ್ಶಗಳನ್ನು ಪ್ರತಿನಿಧಿಗಳಿಗೆ ನೆನಪಿಸಿದರು. "ಯುಎನ್ ಚಾರ್ಟರ್ ಯುದ್ಧವನ್ನು ತಡೆಗಟ್ಟಲು ಮಾತ್ರವಲ್ಲ, ಶಾಂತಿಯನ್ನು ನಿರ್ಮಿಸಲು, ಹಕ್ಕುಗಳನ್ನು ರಕ್ಷಿಸಲು ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿಹಿಡಿಯಲು ನಮಗೆ ಕರೆ ನೀಡುತ್ತದೆ" ಎಂದರು.
ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಪಾಕಿಸ್ತಾನದ ವಿರುದ್ದ ವಿಶ್ವ ವೇದಿಕೆಯಲ್ಲಿ ಟೀಕಾ ಪ್ರಹಾರ ನಡೆಸಿದ ಜೈಶಂಕರ್, "ಭಾರತವು ಸ್ವಾತಂತ್ರ್ಯ ಪಡೆದ ಸಮಯದಿಂದಲೂ ಇದನ್ನು ಎದುರಿಸಿಕೊಂಡು ಬಂದಿದೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ರಾಷ್ಟ್ರವನ್ನು ನಾವು ನಮ್ಮ ನೆರೆಯಲ್ಲಿ ಹೊಂದಿದ್ದೇವೆ. ಪ್ರಮುಖ ಭಯೋತ್ಪಾದಕ ಚಟುವಟಿಕೆಗಳ ಮೂಲವನ್ನು ಹುಡುಕಿದರೆ ಅದು ಒಂದೇ ದೇಶವನ್ನು ತೋರಿಸುತ್ತದೆ. ಗಡಿಯಾಚೆಗಿನ ಅನಾಗರಿಕತೆಯ ಇತ್ತೀಚಿನ ಉದಾಹರಣೆಯೆಂದರೆ ಈ ವರ್ಷದ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಹತ್ಯೆ" ಎಂದರು. ಭಾರತದ ಭದ್ರತಾ ಕಾಳಜಿಗಳ ಬಗ್ಗೆ ಪ್ರಸ್ತಾಪಿಸುತ್ತಾ ಜೈಶಂಕರ್, "ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವಾಗ, ನಾವು ಬೆದರಿಕೆಗಳನ್ನು ದೃಢವಾಗಿ ಎದುರಿಸಬೇಕು. ಭಯೋತ್ಪಾದನೆಯನ್ನು ಎದುರಿಸುವುದು ನಿರ್ದಿಷ್ಟ ಆದ್ಯತೆಯಾಗಿದೆ. ಏಕೆಂದರೆ ಅದು ಧರ್ಮಾಂಧತೆ, ಹಿಂಸೆ, ಅಸಹಿಷ್ಣುತೆ ಮತ್ತು ಭಯವನ್ನು ಒಟ್ಟು ಮಾಡುತ್ತದೆ" ಎಂದು ಅವರು ಹೇಳಿದರು.
ಉಗ್ರ ಕೃತ್ಯ ಮಾಡಿದವರನ್ನು ಮತ್ತು ಅದನ್ನು ಪ್ರಾಯೋಜಿಸಿದವರನ್ನು ನ್ಯಾಯದ ಕಟಕಟೆಗೆ ಎಳೆದು ತರಲು ಭಾರತವು ಸರಿಯಾದ ಕ್ರಮಗಳನ್ನು ಕೈಗೊಂಡಿದೆ ಎಂದು ಜೈಶಂಕರ್ ಹೇಳಿದರು. "ರಾಷ್ಟ್ರಗಳು ಭಯೋತ್ಪಾದನೆಯನ್ನು ಬಹಿರಂಗವಾಗಿ ರಾಜ್ಯ ನೀತಿ ಎಂದು ಘೋಷಿಸಿದಾಗ, ಭಯೋತ್ಪಾದಕ ಕೇಂದ್ರಗಳು ಕೈಗಾರಿಕಾ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದಾಗ, ಭಯೋತ್ಪಾದಕರನ್ನು ಸಾರ್ವಜನಿಕವಾಗಿ ವೈಭವೀಕರಿಸಿದಾಗ, ಅಂತಹ ಕ್ರಮಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು" ಎಂದು ಜೈಶಂಕರ್ ಹೇಳಿದರು.