image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ತೀವ್ರವಾಗಿ ತರಾಟೆಗೆತ್ತಿಕೊಂಡ ಭಾರತ

ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ತೀವ್ರವಾಗಿ ತರಾಟೆಗೆತ್ತಿಕೊಂಡ ಭಾರತ

ಹೊಸದಿಲ್ಲಿ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಿರುವ ಭಾರತ, ಮಾನವ ಹಕ್ಕುಗಳ ಕುರಿತು ಅದರ ಬೂಟಾಟಿಕೆ ಮತ್ತು ಭಯೋತ್ಪಾದನೆಗೆ ಅದರ ದೀರ್ಘ ಕಾಲದ ಬೆಂಬಲಕ್ಕಾಗಿ ಬಲವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ) ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಎರಡರಲ್ಲೂ ಪಾಕಿಸ್ತಾನದ ಹೇಳಿಕೆಗಳನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದು, ಅದು ದಾರಿತಪ್ಪಿಸುವ ಪ್ರಚಾರ ತಂತ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದಂತಹ ದೇಶವು ಮಾನವ ಹಕ್ಕುಗಳ ಬಗ್ಗೆ ಇತರರಿಗೆ ಉಪನ್ಯಾಸ ನೀಡಲು ಪ್ರಯತ್ನಿಸುತ್ತಿರುವುದನ್ನು ಆಳವಾದ ವ್ಯಂಗ್ಯ ಎಂದು ಭಾರತವು ಪರಿಗಣಿಸಿದೆ. ಅಪಪ್ರಚಾರವನ್ನು ಹರಡುವ ಬದಲು ಪಾಕಿಸ್ತಾನವು ತನ್ನದೇ ನೆಲದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವನ್ನು ತಡೆಯಬೇಕು ಎಂದು ಭಾರತೀಯ ರಾಜತಾಂತ್ರಿಕ ಮುಹಮ್ಮದ್ ಹುಸೇನ್ ಅವರು ಜಿನೀವಾದಲ್ಲಿ ನಡೆದ ಯುಎನ್‌ಎಚ್‌ಆರ್‌ಸಿಯ 60ನೇ ಅಧಿವೇಶನದ 34ನೇ ಸಭೆಯಲ್ಲಿ ಹೇಳಿದರು. ತನ್ನ ಖೈಬರ್ ಪಖ್ತುಂಖ್ವಾ ಪ್ರಾಂತದಲ್ಲಿ ಪಾಕಿಸ್ತಾನದ ವಾಯುದಾಳಿಯ ಹಿನ್ನೆಲೆಯಲ್ಲಿ ಹುಸೇನ್ ಅವರ ಈ ಹೇಳಿಕೆ ಹೊರಬಿದ್ದಿದೆ. ದಾಳಿಯಲ್ಲಿ ಕನಿಷ್ಠ 23 ನಾಗರಿಕರು ಮೃತಪಟ್ಟಿದ್ದರು. ಪಾಕಿಸ್ತಾನವು ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಆಂತರಿಕ ಮಾನವ ಹಕ್ಕುಗಳ ಸವಾಲುಗಳನ್ನು ಪರಿಹರಿಸುವಲ್ಲಿ ಅದರ ವೈಫಲ್ಯದ ಬಗ್ಗೆ ಭಾರತದ ದೀರ್ಘಕಾಲದ ಕಳವಳಗಳನ್ನು ಹುಸೇನ್ ಗಮನಸೆಳೆದರು.

700ಕೂ ಅಧಿಕ ಜನರು ಧರ್ಮನಿಂದೆಯ ಆರೋಪಗಳಲ್ಲಿ ಜೈಲುಗಳಲ್ಲಿದ್ದು,ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.300ರಷ್ಟು ಹೆಚ್ಚಳವಾಗಿದೆ ಎನ್ನುವುದನ್ನು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಗಳ ಕುರಿತು ಅಮೆರಿಕದ ಆಯೋಗ(ಯುಎಸ್‌ಸಿಐಆರ್‌ಎಫ್)ದ 2025ನೇ ಸಾಲಿನ ವರದಿಯು ತೋರಿಸಿದೆ ಎಂದು ಹೇಳಿದ ಭೂರಾಜಕೀಯ ಸಂಶೋಧಕ ಜೋಷ್ ಬೋಸ್ ಅವರು, ಬಲೂಚ್ ನ್ಯಾಷನಲ್ ಮೂವ್‌ಮೆಂಟ್‌ನ ಮಾನವ ಹಕ್ಕುಗಳ ಮಂಡಳಿಯು 2025ರ ಮೊದಲ ಆರು ತಿಂಗಳುಗಳಲ್ಲಿ 785 ರಹಸ್ಯ ಬಂಧನಗಳು ಅಥವಾ ಅಪಹರಣಗಳು ಮತ್ತು 121 ಹತ್ಯೆಗಳನ್ನು ದಾಖಲಿಸಿದೆ. 2025ರಲ್ಲಿ 4,000 ಪಶ್ತೂನ್‌ಗಳು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಪಶ್ತೂನ್ ನ್ಯಾಷನಲ್ ಜಿರ್ಗಾ ತಿಳಿಸಿದೆ ಎಂದು ಬೆಟ್ಟು ಮಾಡಿದರು. ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತಗಳು ದೀರ್ಘಕಾಲದಿಂದ ಮಿಲಿಟರಿ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿದ್ದು, ಕಾನೂನುಬಾಹಿರ ಹತ್ಯೆಗಳು, ರಹಸ್ಯ ಬಂಧನಗಳು ಅಥವಾ ಅಪಹರಣಗಳು ಮತ್ತು ಚಿತ್ರಹಿಂಸೆಗಳು ಆಗಾಗ್ಗೆ ವರದಿಯಾಗುತ್ತಿವೆ. ನಾಪತ್ತೆಯಾದವರ ಕುಟುಂಬಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಆರಿಫ್ ಆಜಕಿಯಾ ಹೇಳಿದರು. ಈ ವಾರದ ಆರಂಭದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಅವರ ಹೇಳಿಕೆಗಳನ್ನೂ ಭಾರತವು ತಿರಸ್ಕರಿಸಿತ್ತು.

Category
ಕರಾವಳಿ ತರಂಗಿಣಿ