ನವದೆಹಲಿ: 'ಭಾರತವು ಪಾಕಿಸ್ತಾನದ ಮೇಲೆ ಜಲ ಭಯೋತ್ಪಾದನೆ ನಡೆಸುತ್ತಿದೆ. ಇಂತಹ ನಡೆ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬುದ್ಧಿ ಕಲಿಸಬೇಕು' ಎಂದು ಲಷ್ಕರ್ ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಹೇಳಿದ್ದಾನೆ. ಪಹಲ್ಗಾಮ್ ಉಗ್ರ ದಾಳಿ ರೂವಾರಿ ಕಸೂರಿಯ ವಿಡಿಯೋವೊಂದು ಪಾಕಿಸ್ತಾನದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಭಾರತದ ವಿರುದ್ಧ ಮಾತನಾಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 'ಸಿಂಧೂ ನದಿಯ ನೀರನ್ನು ಭಾರತ ಬಿಡುಗಡೆ ಮಾಡದೇ ಸಂಗ್ರಹಿಸುತ್ತಿದೆ. ಬಳಿಕ ಒಂದೇ ಬಾರಿಗೆ ಎಲ್ಲಾ ನೀರನ್ನು ಬಿಡುವ ಮೂಲಕ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸುವ ಜಲ ಭಯೋತ್ಪಾದನೆ ತಂತ್ರ ಅನುಸರಿಸಲು ಮುಂದಾಗಿದೆ' ಎಂದು ಕಸೂರಿ ಹೇಳಿದ್ದಾರೆ. ಪಾಕಿಸ್ತಾನ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರನ್ನು ಹೊಗಳಿರುವ ಕಸೂರಿ, ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಪ್ರಧಾನಿ ಮೋದಿ ಅವರಿಗೆ ಬುದ್ಧಿ ಕಲಿಸುವ ಕೆಲಸವನ್ನು ಪಾಕ್ ಮಾಡಬೇಕು ಎಂದು ಹೇಳಿದ್ದಾನೆ. ಅಲ್ಲದೇ ಈತ ಭಾರತದ ಮೇಲೆ ಮತ್ತೊಂದು ಉಗ್ರ ದಾಳಿ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.