ಮಾಸ್ಕೋ: ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಒತ್ತಡಕ್ಕೆ ಮಣಿಯುವ ವ್ಯಕ್ತಿಯಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ. ಭಾರತ ಪ್ರವಾಸಕ್ಕೂ ಮುನ್ನ ಭಾರತದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಭಾರತದ ಮೇಲೆ ಸುಂಕ ಏರಿಸುವ ಮೂಲಕ ಒತ್ತಡ ಹೇರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಪುಟಿನ್, ಎರಡೂ ರಾಷ್ಟ್ರಗಳ ನಡುವೆ ಚರ್ಚಿಸಲು ಹಲವಾರು ವಿಷಯಗಳಿವೆ. ನಮ್ಮ ನಡುವಿನ ಸಂಬಂಧ ವಿಶಿಷ್ಟ ಇತಿಹಾಸವನ್ನು ಎತ್ತಿ ತೋರಿಸುತ್ತದೆ ಎಂದರು. ರಕ್ಷಣಾ ವ್ಯವಸ್ಥೆ ಬಗ್ಗೆ ಕೇಳಿದಾಗ, ರಷ್ಯಾವೂ ಎಸ್-400/500 ಯುದ್ಧ ವಿಮಾನಗಳು ಸೇರಿದಂತೆ ಅನೇಕ ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡಿದೆ. ಅದರ ಜತೆ ತಂತ್ರಜ್ಞಾನವನ್ನು ಹಂಚಿಕೊಂಡಿದೆ. ಇತ್ತೀಚೆಗೆ ಬ್ರಹ್ಮೋಸ್ ಯುದ್ಧ ವಿಮಾನವನ್ನು ಭಾರತವೇ ತಯಾರಿಸಿಕೊಳ್ಳುತ್ತಿದೆ ಎಂದರು.
ಚೀನಾದ ಎಸ್‌ಸಿಒ ಶೃಂಗದಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಟಿನ್, ಶೃಂಗಸಭೆ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಕಾರಿನಲ್ಲಿ ಸಂಚರಿಸುವ ಐಡಿಯಾ ನನ್ನದೇ ಆಗಿತ್ತು. ಅದು ನಮ್ಮ ಸ್ನೇಹದ ಸಂಕೇತ ಎಂದು ಹೇಳಿದ್ದಾರೆ. ಕಾರಿನಲ್ಲಿ ಒಟ್ಟಿಗೆ ಸಂಚಾರ ಮಾಡುವುದು ಪೂರ್ವ ಯೋಜಿತವಲ್ಲ. ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಹೋಗಲು ಇಬ್ಬರೂ ಒಟ್ಟಿಗೆ ಹೊರಗೆ ಬಂದೆವು. ಈ ವೇಳೆ ನಮ್ಮ ಕಾರು ಅಲ್ಲಿತ್ತು. ಆದ್ದರಿಂದ ಇಬ್ಬರೂ ಒಟ್ಟಿಗೆ ಹೋಗೋಣವೆಂದು ನಾನು ಮೋದಿ ಅವರನ್ನು ಕೇಳಿಕೊಂಡೆ. ಆಗ ಅವರು ನನ್ನ ಕಾರಲ್ಲೇ ಸಂಚಾರ ಮಾಡಿದರು ಎಂದು ಹೇಳಿದರು.