ಅಮೇರಿಕ : ಅಮೇರಿಕಾದಲ್ಲಿ ಆರ್ಥಿಕ ಹಿಂಜರಿತದ ಲಕ್ಷಣಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಈ ವರ್ಷ ದಿವಾಳಿತನ ಅರ್ಜಿಗಳ ಸಂಖ್ಯೆ 15 ವರ್ಷಗಳ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ನವೆಂಬರ್ ಅಂತ್ಯದವರೆಗೆ 717 ಕ್ಕೂ ಹೆಚ್ಚು ದೊಡ್ಡ ಕಂಪನಿಗಳು ಮತ್ತು 2221 ಕ್ಕೂ ಹೆಚ್ಚು ಸಣ್ಣ ಕಂಪನಿಗಳು ದಿವಾಳಿತನಕ್ಕೆ ಅರ್ಜಿ ಸಲ್ಲಿಸಿವೆ. ಕಳೆದ ವರ್ಷ (2024) ಇದೇ ಅವಧಿಗೆ ಹೋಲಿಸಿದರೆ ದೊಡ್ಡ ಕಂಪನಿಗಳ ದಿವಾಳಿತನ ಪ್ರಮಾಣ ಶೇ.40ರಷ್ಟು ಹೆಚ್ಚಳವಾಗಿದ್ದರೆ, ಸಣ್ಣ ಕಂಪನಿಗಳ ದಿವಾಳಿತನ ಶೇ.83 ರಷ್ಟು ಜಿಗಿದಿದೆ. ಸತತ ಮೂರನೇ ವರ್ಷವೂ ದಿವಾಳಿತನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, 2022ಕ್ಕೆ ಹೋಲಿಸಿದರೆ ಈ ವರ್ಷ ಶೇ.93ರಷ್ಟು ಹೆಚ್ಚಳವಾಗಿದೆ. ಈ ಸಂಖ್ಯೆ 2011 ರಿಂದ 2024ರವರೆಗಿನ ವಾರ್ಷಿಕ ಸರಾಸರಿಗಿಂತ ಶೇ.30 ರಷ್ಟು ಹೆಚ್ಚಾಗಿದೆ.ಹೆಚ್ಚಿನ ಬಡ್ಡಿದರ, ಗ್ರಾಹಕರ ಎಚ್ಚರಿಕೆಯ ಖರ್ಚು ವರ್ತನೆ, ಆರ್ಥಿಕ ಅನಿಶ್ಚಿತತೆ ಹಾಗೂ ಟ್ರಂಪ್ ಆಡಳಿತದ ಹೊಸ ಸುಂಕ ನೀತಿಗಳು (ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ.೫೦ರವರೆಗೆ ಸುಂಕ) ವ್ಯಾಪಾರ ವೆಚ್ಚವನ್ನು ಹೆಚ್ಚಿಸಿ, ಲಾಭದ ಮಾರ್ಜಿನ್‌ಗಳನ್ನು ಕುಗ್ಗಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕವು ಇನ್ನೂ ವಿಶ್ವದ ಅತಿದೊಡ್ಡ ಆರ್ಥಿಕತೆಯೇ ಆಗಿದ್ದರೂ, ಈ ದಿವಾಳಿತನ ಲಹರಿಯು ದೇಶದ ಆರ್ಥಿಕ ಚೇತರಿಕೆಯಲ್ಲಿ ಗಂಭೀರ ತೊಡಕುಗಳಿರುವುದನ್ನು ಸೂಚಿಸುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.