ವಾಷಿಂಗ್ಟನ್: ವೆನಿಜುವೆಲಾ ಕರಾವಳಿಯಲ್ಲಿ ತೈಲ ಟ್ಯಾಂಕರ್ ಅನ್ನು ಅಮೆರಿಕದ ಸೇನಾಪಡೆ ವಶಪಡಿಸಿಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರೊಂದಿಗೆ ಸಮರ ತೀವ್ರಗೊಂಡಿದೆ. ಅಮೆರಿಕದಲ್ಲಿ ಮಾದಕವಸ್ತು ಉಗ್ರವಾದ ಜಾಲದ ಆರೋಪ ಮಡುರೊ ಮೇಲೆ ಇದ್ದು, ವೆನಿಜುವೆಲಾದ ಮೇಲೆ ಹೆಚ್ಚಿನ ಒತ್ತಡ ಹೇರಲು ಟ್ರಂಪ್ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ.
'ನಾವು ವೆನಿಜುವೆಲಾ ಕರಾವಳಿಯಲ್ಲಿ ಒಂದು ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದೇವೆ. ನಿಜವಾಗಿ ಇದುವರೆಗೆ ವಶಪಡಿಸಿಕೊಂಡಿರುವುದರಲ್ಲಿ ಅತಿ ದೊಡ್ಡದಾಗಿದೆ' ಎಂದು ಶ್ವೇತಭವನದಲ್ಲಿ ಟ್ರಂಪ್ ತಿಳಿಸಿದ್ದಾರೆ. 'ಇನ್ನು ಹೆಚ್ಚಿನ ವಿಷಯಗಳು ನಡೆಯುತ್ತಿದೆ' ಎಂದಷ್ಟೇ ಟ್ರಂಪ್ ಹೇಳಿದ್ದಾರೆ. 'ಅಮೆರಿಕದ ಕರಾವಳಿ ರಕ್ಷಣಾ ಪಡೆ ಹಾಗೂ ನೌಕಪಡೆ ಕಾರ್ಯಾಚರಣೆಯನ್ನು ನಡೆಸಿತು' ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ದಿನದ ಹಿಂದೆಯಷ್ಟೇ ವೆನಿಜುವೆಲಾ ಕೊಲ್ಲಿಯ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದು ಮತ್ತಷ್ಟು ಉದ್ವಿಗ್ನ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಈ ಪ್ರದೇಶದಲ್ಲಿ ಅಮೆರಿಕ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿದ್ದು, ಕೆರೆಬಿಯನ್ ಸಮುದ್ರ ಹಾಗೂ ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಸರಣಿ ದಾಳಿಯನ್ನು ನಡೆಸುತ್ತಿದೆ.