ನ್ಯೂಯಾರ್ಕ್ : 'ತೆರಿಗೆ ಎಂಬುದಕ್ಕಿಂತ ಸುಂದರ ಪದವಿಲ್ಲ' ಎನ್ನುತ್ತಾ ತಮ್ಮ ವ್ಯಾಪಾರ ಪಾಲುದಾರ ದೇಶಗಳಿಗೆ ಮನಸೋಇಚ್ಚೆ ತೆರಿಗೆ ಬರೆ ಎಳೆಯುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೆ ಅಮೆರಿಕನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಭಾರತದ ಮೇಲೆ ಹೇರಿದ ಶೇ.50ರಷ್ಟು ತೆರಿಗೆಯನ್ನು ನಿಲ್ಲಿಸಬೇಕು ಎಂದು ಮೂವರು ಪ್ರಭಾವಿ ಸಂಸದರು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ. ಟ್ರಂಪ್ ನಡೆಯನ್ನು ಬೇಜವಾಬ್ದಾರಿಯುತ ಎಂದು ಕರೆದಿರುವ ಉತ್ತರ ಕ್ಯಾರೊಲಿನಾದ ಡೆಬೊರಾ ರಾಸ್, ಟೆಕ್ಸಸ್ ಮಾರ್ಕ್ ವೆಸಿ ಮತ್ತು ಇಲ್ಲಿನಾಯ್ಸ್‌ನ ರಾಜಾ ಕೃಷ್ಣಮೂರ್ತಿ, 'ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ದುರ್ಬಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ಮೂಲದ ಕೃಷ್ಣಮೂರ್ತಿ, 'ಈ ತೆರಿಗೆಯು ಭಾರತದ ಸಂಬಂಧವನ್ನು ಹಾಳು ಮಾಡುತ್ತದೆ. ಅಮೆರಿಕದ ಹಿತಾಸಕ್ತಿ ರಕ್ಷಣೆಯಾಗುವ ಬದಲು, ಪೂರೈಕೆ ಸರಪಳಿಗೆ ಹೊಡೆತ ಬೀಳುತ್ತದೆ, ಅಮೆರಿಕದ ನೌಕರರಿಗೆ ಸಮಸ್ಯೆಯಾಗುತ್ತದೆ, ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ತೆರಿಗೆಯನ್ನು ರದ್ದುಗೊಳಿಸುವುದರಿಂದ ಸಂಬಂಧ ವೃದ್ಧಿಯಾಗುತ್ತದೆ' ಎಂದು ಹೇಳಿದ್ದಾರೆ. ಇನ್ನಿಬ್ಬರು ಸಂಸದರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರೆಜಿಲ್ ಮೇಲಿನ ಸುಂಕವನ್ನು ಕೊನೆಗೊಳಿಸುವ ಮಸೂದೆ ಅಮೆರಿಕದ ಸೆನೆಟ್‌ನಲ್ಲಿ ಅಂಗೀಕಾರವಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಯಾಗಿದೆ.