ವಾಷಿಂಗ್ಟನ್: ಹೊಸದಾಗಿ ನೀಡುವ ಎಚ್1ಬಿ ವೀಸಾ ಮೇಲೆ 90 ಲಕ್ಷ ರು. ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ಅಮೆರಿಕದ 20 ರಾಜ್ಯಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ. ಟ್ರಂಪ್‌ರ ಈ ನಿರ್ಧಾರದಿಂದ ಆರೋಗ್ಯ ಶಿಕ್ಷಣ, ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗಲಿದೆ ಎಂದು ತಮ್ಮ ದಾವೆಯಲ್ಲಿ ಎಚ್ಚರಿಸಿವೆ. ಮೆಸಾಚುಸೆಟ್ಸ್ ಜಿಲ್ಲಾ ಕೋರ್ಟ್‌ನಲ್ಲಿ ಈ ಸಂಬಂಧ ಮೊಕದ್ದಮೆ ದಾಖಲಿಸಿರುವ ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಮತ್ತು ಇತರೆ 19 ಅಟಾರ್ನಿ ಜನರಲ್‌ಗಳು ಟ್ರಂಪ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್1ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ನಿರ್ಧಾರವನ್ನು ಸೂಕ್ತ ಪ್ರಕ್ರಿಯೆಗಳನ್ನು ನಡೆಸದೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಎಚ್ 1ಬಿ ವೀಸಾವು ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವೀಸಾದ ಲಾಭ ಪಡೆಯುತ್ತಿದ್ದರು. ಇದೀಗ ಟ್ರಂಪ್ ಸರ್ಕಾರದ ಕ್ರಮವು ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಮತ್ತು ಇತರೆ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಎಚ್1 ಬಿ ವೀಸಾ ಮೇಲೆ ಅವಲಂಬಿತ ಸರ್ಕಾರಿ ಹಾಗೂ ಸೇವಾ ಸಂಸ್ಥೆಗಳ ಉದ್ಯೋಗದಾತರಿಗೆ ಸಂಕಷ್ಟ ತಂದೊಡ್ಡಲಿದೆ. ಟ್ರಂಪ್ ಸರ್ಕಾರ ನಮ್ಮ ಆರ್ಥಿಕತೆಗೆ ಹೊಡೆತ ನೀಡಲಿದೆ. ವಲಸಿಗರ ಮೇಲಿನ ದಾಳಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಜೇಮ್ಸ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಟ್ರಂಪ್ ಹೊಸ ಎಚ್ 1 ಬಿ ವೀಸಾಗೆ 90 ಲಕ್ಷ ರು. ಶುಲ್ಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದರು. ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲರಾಡೋ, ಕನೆಕ್ಟಿಕಟ್, ಡೆಲಾವರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮೆಸಾಚುಸೆಟ್ಸ್, ಮಿಚಿಗನ್, ಮಿನ್ನೆಸೊಟಾ, ನಾರ್ಥ್ ಕೆರೋಲಿನಾ, ನ್ಯೂಜೆನ್ಸಿ, ಓರೇಗನ್, ರೋಡ್ ಐಲ್ಯಾಂಡ್, ವರ್ಮೌಂಟ್, ವಾಷಿಂಗ್ಟನ್ ಮತ್ತು ವಿಲ್ಡನ್ಸಿನ್ ರಾಜ್ಯಗಳು ಟ್ರಂಪ್ ವಿರುದ್ಧ ಸಮರಕ್ಕೆ ಮುಂದಾಗಿವೆ.