image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸೌದಿ ಅರೇಬಿಯಾದಲ್ಲಿ ಪ್ರಕೃತಿಯ ವಿಸ್ಮಯ : ಉತ್ತರ ಸೌದಿಯ ತಬೂಲ್ ನಲ್ಲಿ ಹಿಮಪಾತ

ಸೌದಿ ಅರೇಬಿಯಾದಲ್ಲಿ ಪ್ರಕೃತಿಯ ವಿಸ್ಮಯ : ಉತ್ತರ ಸೌದಿಯ ತಬೂಲ್ ನಲ್ಲಿ ಹಿಮಪಾತ

ಸೌದಿ ಅರೇಬಿಯಾ : ಸುಡುವ ಬಿಸಿಲು ಮತ್ತು ವಿಶಾಲವಾದ ಮರುಭೂಮಿಗಳಿಂದಲೇ ಗುರುತಿಸಿಕೊಳ್ಳುವ ಸೌದಿ ಅರೇಬಿಯಾದಲ್ಲಿ ಪ್ರಕೃತಿಯ ವಿಸ್ಮಯವೊಂದು ಸಂಭವಿಸಿದೆ. ಉತ್ತರ ಸೌದಿ ಅರೇಬಿಯಾದ ಪರ್ವತ ಶ್ರೇಣಿಗಳು ಈಗ ಶ್ವೇತವರ್ಣದ ಹಿಮದಿಂದ ಕಂಗೊಳಿಸುತ್ತಿದ್ದು, ಮರಳುಗಾಡು ದೃಶ್ಯವು ಸಂಪೂರ್ಣವಾಗಿ ಹಿಮಲೋಕವಾಗಿ ಮಾರ್ಪಟ್ಟಿದೆ. ತಬೂಕ್ ಪ್ರಾಂತ್ಯದ ಜಬಲ್ ಅಲ್ ಲಾವ್ಜ್ ಬೆಟ್ಟಗಳಲ್ಲಿ ಭಾರಿ ಹಿಮಪಾತವಾಗಿದ್ದು, ಇಲ್ಲಿನ ತಾಪಮಾನವು ಮೈನಸ್ ಡಿಗ್ರಿಗೆ ಕುಸಿದಿದೆ. ಈ ದೃಶ್ಯಗಳನ್ನು ಕಂಡ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಇವುಗಳು ಕೃತಕ ಬುದ್ಧಿಮತ್ತೆಯಿಂದ (AI) ಸೃಷ್ಟಿಯಾದ ಚಿತ್ರಗಳಿರಬಹುದು ಎಂಬ ಸಂಶಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸೌದಿ ಗೆಜೆಟ್ ವರದಿಯ ಪ್ರಕಾರ, ಟ್ರೋಜಿನಾ ಹೈಲ್ಯಾಂಡ್ಸ್‌ನಲ್ಲಿ ಸಾಧಾರಣ ಮಳೆಯೊಂದಿಗೆ ಹಿಮಪಾತವಾಗುತ್ತಿದೆ. ಬಿರ್ ಬಿನ್ ಹಿರ್ಮಾಸ್, ಅಲ್-ಉಯಯ್ನಾ ಮತ್ತು ಶಿಕ್ರಿಯಂತಹ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2580 ಮೀಟರ್ ಎತ್ತರದಲ್ಲಿರುವ ‘ಬಾದಾಮಿ ಬೆಟ್ಟ’ ಎಂದೇ ಕರೆಯಲ್ಪಡುವ ಜಬಲ್ ಅಲ್ ಲಾವ್ಜ್ ಪ್ರಸ್ತುತ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ. ಸೌದಿಯ ಹವಾಮಾನ ಇಲಾಖೆಯು ರಿಯಾದ್ ಸೇರಿದಂತೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಸೌದಿ ಅರೇಬಿಯಾದ ಈ ಬದಲಾದ ಹವಾಮಾನವು ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಅವರ ಭವಿಷ್ಯವಾಣಿಯನ್ನು ನೆನಪಿಸುವಂತೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇಸ್ಲಾಮಿಕ್ ಹದೀಸ್‌ಗಳ ಪ್ರಕಾರ, “ಅಂತಿಮ ದಿನಗಳು ಹತ್ತಿರವಾದಾಗ ಅರೇಬಿಯನ್ ಪೆನಿನ್ಸುಲಾ (ಅರಬ್ ಭೂಭಾಗ) ಮತ್ತೆ ಹಸಿರಿನಿಂದ ಕೂಡಿ ಹರಿಯುವ ನದಿಗಳಿಂದ ತುಂಬಿಕೊಳ್ಳಲಿದೆ” ಎಂಬ ಉಲ್ಲೇಖವಿದೆ. ಈಗ ಸೌದಿಯಲ್ಲಿ ಹೆಚ್ಚುತ್ತಿರುವ ಮಳೆ ಮತ್ತು ಹಸಿರು ಕಾಣಿಸಿಕೊಳ್ಳುತ್ತಿರುವುದು ಆ ಭವಿಷ್ಯವಾಣಿಯ ಆರಂಭವಿರಬಹುದೇ ಎಂದು ಅನೇಕರು ಆತಂಕ ಮತ್ತು ಕುತೂಹಲದಿಂದ ಚರ್ಚಿಸುತ್ತಿದ್ದಾರೆ. ಹವಾಮಾನ ತಜ್ಞರ ಪ್ರಕಾರ, ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಮರುಭೂಮಿಯ ಮಣ್ಣಿನಲ್ಲಿ ತೇವಾಂಶ ಹೆಚ್ಚುತ್ತಿದ್ದು, ಸಸ್ಯವರ್ಗದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಪ್ರಕೃತಿಯ ಈ ವಿಸ್ಮಯವು ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾವನ್ನು ಫಲವತ್ತಾದ ಪ್ರದೇಶವನ್ನಾಗಿ ಬದಲಿಸಿದರೂ ಆಶ್ಚರ್ಯವಿಲ್ಲ.

Category
ಕರಾವಳಿ ತರಂಗಿಣಿ