ಕ್ವೆಟ್ಟಾ: ನೆರೆಯ ಪಾಕಿಸ್ತಾನಕ್ಕೆ ಈಗ ಆಂತರಿಕ ದಂಗೆಯ ಬಿಸಿ ತಟ್ಟಿದೆ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸಂಘಟನೆಯು ಪಾಕಿಸ್ತಾನದ ಏಳು ಪ್ರಮುಖ ನಗರಗಳ ಮೇಲೆ ಏಕಕಾಲದಲ್ಲಿ ಭೀಕರ ದಾಳಿ ನಡೆಸಿ ದ ಘಟನೆ ವರದಿಯಾಗಿದೆ. ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಪಾಕಿಸ್ತಾನ ಸೇನೆಯು ನಿಯಂತ್ರಣ ಸಾಧಿಸಲು ಹರಸಾಹಸ ಪಡುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ವರದಿಗಳ ಪ್ರಕಾರ, ಬಿಎಲ್‌ಎ ಹೋರಾಟಗಾರರು ಕ್ವೆಟ್ಟಾ, ಕೆಚ್, ಮಸ್ತುಂಗ್, ಪಂಜ್‌ಗುರ್, ನುಷ್ಕಿ, ಖುಜ್ದಾರ್ ಮತ್ತು ಕಚ್ಚಿ ಜಿಲ್ಲೆಗಳ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ರಾಕೆಟ್ ಲಾಂಚರ್ ಮತ್ತು ಐಇಡಿ (IED) ಸ್ಫೋಟಕಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಪಾಕಿಸ್ತಾನ ಸೇನೆಯ ಬೆಂಗಾವಲು ಪಡೆಗಳು, ಚೆಕ್‌ಪೋಸ್ಟ್‌ಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಪರಿಸ್ಥಿತಿ ಕ್ವೆಟ್ಟಾದಲ್ಲಿ ತೀರಾ ಹದಗೆಟ್ಟಿದೆ. ಬಿಎಲ್‌ಎ ಹೋರಾಟಗಾರರು ಕ್ವೆಟ್ಟಾದ ಕೆಲವು ಭಾಗಗಳಲ್ಲಿ ಪಾಕಿಸ್ತಾನ ಸೇನೆಯ ಪ್ರಮುಖ ನೆಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಫ್ರಾಂಟಿಯರ್ ಕೋರ್ (FC) ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯಿಂದಾಗಿ ಸೇನೆಗೆ ಭಾರೀ ಸಾವುನೋವು ಸಂಭವಿಸಿದೆ ಎಂದು ವರದಿಯಾಗಿದೆ. ನಗರದ ರಸ್ತೆಗಳಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು, ಇಡೀ ನಗರವು ಸ್ತಬ್ದಗೊಂಡಿದೆ.
ಇತ್ತೀಚೆಗೆ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದ ಸುಮಾರು 41ಕ್ಕೂ ಹೆಚ್ಚು ಸೈನಿಕರು ಮತ್ತು ಅಧಿಕಾರಿಗಳು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಚ್ಚಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟವೊಂದರಲ್ಲಿ ಸೈನಿಕರಿದ್ದ ವಾಹನ ಸಂಪೂರ್ಣ ಧ್ವಂಸಗೊಂಡು, 14ಕ್ಕೂ ಹೆಚ್ಚು ಸೈನಿಕರ ದೇಹಗಳು ಛಿದ್ರಗೊಂಡಿವೆ. ಈ ದಾಳಿಯ ವಿಡಿಯೋಗಳನ್ನು ಬಿಎಲ್‌ಎ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವ ಮೂಲಕ ಪಾಕ್ ಸೇನೆಗೆ ಸವಾಲು ಹಾಕಿದೆ. ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರವು ಚೀನಾ ಜೊತೆಗೂಡಿ ಲೂಟಿ ಮಾಡುತ್ತಿದೆ ಮತ್ತು ಸ್ಥಳೀಯ ಬಲೂಚ್ ಜನರಿಗೆ ಯಾವುದೇ ಅಭಿವೃದ್ಧಿ ತಲುಪಿಸುತ್ತಿಲ್ಲ ಎಂಬುದು ಬಿಎಲ್‌ಎ ಆರೋಪ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಬಲೂಚ್ ಹೋರಾಟಗಾರರು, ಈಗ ನೇರ ಯುದ್ಧಕ್ಕೆ ಇಳಿದಿದ್ದಾರೆ.