image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಣೇಶನಿಗೆ ಪ್ರೀಯವೆನ್ನಲಾಗುವ 'ದಾಸವಾಳ' ಹೂವಿನ ಔಷಧೀಯ ಗುಣ ತಿಳಿದುಕೊಳ್ಳೋಣ ಬನ್ನಿ....

ಗಣೇಶನಿಗೆ ಪ್ರೀಯವೆನ್ನಲಾಗುವ 'ದಾಸವಾಳ' ಹೂವಿನ ಔಷಧೀಯ ಗುಣ ತಿಳಿದುಕೊಳ್ಳೋಣ ಬನ್ನಿ....

ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ, ಬೇಲಿಗಳಲ್ಲಿ ಕಾಣ ಸಿಗುವ ದಾಸವಾಳ ಹೂವು ಗಣೇಶನಿಗೆ ಬಲು ಪ್ರೀಯವಂತೆ. ಇದರಲ್ಲಿ ಮುಖ್ಯವಾಗಿ ಕೆಂಪು ಮತ್ತು ಬಿಳಿ ಬಣ್ಣದ ಹೂವುಗಳನ್ನು ಕಾಣಬಹುದು. ಬಿಳಿ ದಾಸವಾಳಕ್ಕೆ ಮನೆ ಮದ್ದಿನಲ್ಲಿ ಪ್ರಮುಖವಾದ ಸ್ಥಾನವಿದೆ. ದಾಸವಾಳದ ಗಿಡದ ಬೇರು, ಎಲೆ ಮತ್ತು ಹೂವುಗಳಲ್ಲಿ ಔಷದೀಯ ಗುಣವಿರುವುದನ್ನು ಅರಿತ ನಮ್ಮ ಹಿರಿಯರು ಇದನ್ನು ಮನೆ ಮದ್ದಿನಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. 

ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸಳದ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ದಾಸವಾಳದ ಹೂವಿನಲ್ಲಿ ವಿಟಮಿನ್ ಸಿ ಅಧಿಕ ವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

ಮಹಿಳೆಯರಲ್ಲಿ ಕಾಣುವ ಬಿಳುಪು ಹೋಗುವ ಸಮಸ್ಯೆಗೆ ದಿನ ಒಂದು ಬಿಳಿ ದಾಸವಾಳ ಹೂ ತಿಂದರೆ ಪರಿಹಾರ ಸಿಗುತ್ತದೆ.

ಮಹಿಳೆಯರಿಗೆ ಮೆನೋಪಾಸ್ ಸಮಯದಲ್ಲಿ ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಟೀ ಮಾಡಿ ಕುಡಿಯುವುದು ಒಳ್ಳೆಯದು.

ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಇದು ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ.

ದಾಸವಾಳದ ಟೀ ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ.

ಒಣ ತ್ವೆಚೆ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು.

ತೆಂಗಿನ ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದ ಬಹುದು. ಅದರೊಂದಿಗೆ ಪ್ರತೀ ದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲು ಪಡೆಯಬಹುದು.

ದಾಸವಾಳದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ  ನೀರಿನ ಅಂಶ ಆವಿಯಾಗುವವರೆಗೂ ಕುದಿಸಿ, ಆ ಎಣ್ಣೆಯನ್ನು ಗಾಯಗಳಿಗೆ ಲೇಪಿಸಿದರೆ ಚರ್ಮ ರೋಗ ಗುಣಮುಖವಾಗುತ್ತದೆ.

ನೆನೆಸಿದ ಅಕ್ಕಿಯ ಜೊತೆ ಬಿಳಿ ದಾಸವಾಳ ರುಬ್ಬಿ ಮಾಡಿದ ದೋಸೆ  ತಿನ್ನುವುದರಿಂದ ದೇಹಕ್ಕೆ ತಂಪು.

ಬಿಳಿ ದಾಸವಾಳದ ಎಲೆಗಳನ್ನು ನೀರಿನಲ್ಲಿ ಹಾಕಿ ಕಿವುಚಿ, ಬರುವ ರಸಕ್ಕೆ ಬೆಲ್ಲ, ಹಾಲು ಹಾಕಿ ಕುಡಿದರೆ ದೇಹದ ಉಷ್ಣ ಕಡಿಮೆ ಆಗುತ್ತದೆ.

ದಾಸವಾಳ ಎಲೆಯ ಲೋಳೆ ತಲೆ ಕೂದಲಿಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ದಾಸವಾಳ ಹೂವಿನಿಂದ ತೆಗೆದ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ನೀಡಿ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ.

ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.

ಯಾವುದೇ ಮನೆಮದ್ದು ಉಪಯೋಗಿಸುವ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ