ಅರಶಿನ ಎಲೆಯಂತೆ ಕಾಣುವ ಎಲೆಗಳನ್ನು ಹೊಂದಿರುವ ‘ಕೂವೆ’ ಒಂದು ಔಷಧೀಯ ಸಸ್ಯವಾಗಿದೆ. ನಾಗರ ಪಂಚಮಿ ಸಮಯದಲ್ಲಿ ಅರಶಿನ ಎಲೆಯ ಜೊತೆ ಕೂವೆ ಎಲೆಯನ್ನೂ ಸೇರಿಸಿ ಮಾರಾಟ ಮಾಡುವವರು ಕೂಡ ಇದ್ದಾರೆ. ಅರಶಿನ ಎಲೆಗಿಂತ ಸ್ವಲ್ಪ ದಪ್ಪ ಮತ್ತು ದೊಡ್ಡದಾಗಿರುವ ಕಾರಣ ಸುಲಭವಾಗಿ ಪತ್ತೆ ಹಚ್ಚಬಹುದು. ಅರಶಿಣದಂತೆ ಪರಿಮಳ ಇರುವುದಿಲ್ಲ. ಸಾದಾರಣವಾಗಿ ತುಳುನಾಡಿನ ಎಲ್ಲರ ಮನೆಯ ಹಿತ್ತಲಿನಲ್ಲಿ ಕಾಣಸಿಗುತ್ತಿತ್ತು. ಈ ಸಸಿಯಲ್ಲಿ ಮೂಲಂಗಿಯಂತಹ ಗೆಡ್ಡೆ ಸಿಗುತ್ತದೆ. ಇದು ಒಂದು ಔಷಧೀಯ ಗೆಡ್ಡೆ ಎಂದರೆ ತಪ್ಪಾಗಲ್ಲ. ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಈ ಗೆಡ್ಡೆಗಳನ್ನು ತೊಳೆದು, ಹೆಚ್ಚಿ, ರುಬ್ಬಿ ಶುಭ್ರವಾದ ತೆಳುಬಟ್ಟೆಯಲ್ಲಿ ಸೋಸಿದಾಗ ತೆಳ್ಳನೆಯ ದೋಸೆ ಹಿಟ್ಟಿನಂತೆ ತಳದಲ್ಲಿ ಉಳಿಯುತ್ತದೆ. ಇದನ್ನು ಹಾಗೆಯೇ ಪಾತ್ರೆಯಲ್ಲಿಟ್ಟು, ಮರುದಿನ ಮೇಲಿರುವ ನೀರನ್ನು ತೆಗೆದು, ತಳದಲ್ಲಿ ಉಳಿದ ಹಿಟ್ಟನ್ನು ಬಟ್ಟೆಯಲ್ಲಿ ಹರವಿ ಬಿಸಿಲಿನಲ್ಲಿ ಒಣಗಿಸಿದಾಗ ’ಕೂವೆ ಹುಡಿ’ ಸಿಗುತ್ತದೆ. ಹಿಂದೆ ಕೂವೆಮಣ್ಣಿಯನ್ನು ಸಣ್ಣಮಕ್ಕಳಿಗೆ ಬಾಲಾಹಾರವಾಗಿ ಉಪಯೋಗಿಸುತ್ತಿದ್ದರು. ಇದು ಅತ್ಯುತ್ತಮವಾದ, ನೈಸರ್ಗಿಕ ಶಿಶು ಆಹಾರ. ಆದರೆ ಇಂದು ಇಂತಹ ನೈಸರ್ಗಿಕ ಆಹಾರಗಳು ಮರೆಯಾಗಿವೆ. ಕೂವೆಹಿಟ್ಟಿನಿಂದ ಹಪ್ಪಳ, ಸಂಡಿಗೆ, ಬಾಳಕ, ದೋಸೆಯಂತಹ ಪದಾರ್ಥಗಳನ್ನು ಇಂದಿಗೂ ತಯಾರಿಸುತ್ತಾರೆ.
ಎಲ್ಲಾ ವಯಸ್ಸಿನವರಿಗೂ ನಿಶ್ಶಕ್ತಿಗೆ ಕೂವೆ ಹಿಟ್ಟಿನ ಮಣ್ಣಿ ಮಾಡಿ ತಿಂದರೆ ಉತ್ತಮ ಔಷಧಿಯಾಗಬಲ್ಲದು
ಕೂವೆ ಹಿಟ್ಟಿಗೆ, ಹಾಲು ಸೇರಿಸಿ ಕುದಿಸಿ ಮಕ್ಕಳಿಗೆ ತಿನ್ನಿಸುವುದರಿಂದಮಕ್ಕಳಿಗೆ ಬೇದಿ ಕಡಿಮೆಯಾಗುತ್ತದೆ.
ಗರ್ಭಿಣಿಯರಿಗೂ ಇದು ದೇಹಕ್ಕೆ ಬಹಳ ತಂಪು, ಶಕ್ತಿದಾಯಕ.
ಕೂವೆಹಿಟ್ಟನ್ನು ಹಾಲು, ನೀರು ಸೇರಿಸಿ, ಕುದಿಸಿ ತೆಳ್ಳಗೆ ಹಾಲಿನಂತೆ ಮಾಡಿ ಕುಡಿಯುವುದರಿಂದ ಮಲಬದ್ದತೆ ಕಡಿಮೆಯಾಗುತ್ತದೆ.
ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂವೆ ಹಿಟ್ಟಿನ ಕಷಾಯ ಉತ್ತಮ.
ಯಾವುದೇ ಮನೆ ಮದ್ದು ಬಳಸುವ ಮುನ್ನ ತಜ್ಜರ ಸಲಹೆ ಪಡೆಯಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ