ಎತ್ತಿನಗಾಡಿ ಹೋಗುತ್ತಿರುವಾಗ ಐದು ಅಡಿ ದೂರವಿರಿ, ಕುದುರೆ ಹಾದು ಹೋಗುವಾಗ ಹತ್ತು ಅಡಿ ದೂರವಿರಿ, ಆನೆಗೆ ಸಾವಿರ ಅಡಿ ದೂರವಿರಿ, ದುಷ್ಟ ಜನರಿಂದ ಎಷ್ಟು ದೂರ ಸಾಧ್ಯವೋ ಅಷ್ಟು ದೂರವಿರಿ ಎಂಬುದು ನಮ್ಮ ಹಿರಿಯರ ಹಿತಶಯೋಕ್ತಿ. ಹೌದು ಇದನ್ನು ಕೇಳಿದಾಗ ದುಷ್ಟರಿಂದ ದೂರ ಇರಬೇಕೆನ್ನುವ ಮನಸ್ಸು ಮಾಡಬೇಕು ಎನ್ನಿಸುತ್ತದೆ. ಆದರೆ ದುಷ್ಟರು ಯಾರು ಎನ್ನುವುದೇ ನನ್ನನ್ನು ಆಗಾಗ ಕಾಡುವ ಪ್ರಶ್ನೆ. ಎಲ್ಲವೂ ಚೆನ್ನಾಗಿದ್ದಾಗ ನಮಗೆ ಎಲ್ಲರೂ ಹಿತವರೇ. ಆದರೆ ಯಾವಾಗ ನಿನ್ನ ಸಮಯ ಕೆಡುವುದೋ ಆಗ ತಿಳಿಯುವುದು ನಿನ್ನರ‍್ಯಾರು ಎಂದು. ಯಾರೋ ಒಬ್ಬರು ಚೆನ್ನಾಗಿ ಮಾತಾಡಿದ ಕೂಡಲೇ ಅವರ ರಂಗಿನ ಮಾತುಗಳನ್ನು ನಂಬುವುದೇ ನಮ್ಮ ಮುಗ್ದತೆ ಇರಬೇಕು. ಆ ಮುಗ್ದತೆಗಿಂತ ದುಷ್ಟರು ನಮಗೆ ಇನ್ಯಾರಿರಲು ಸಾದ್ಯ. ಈ ಮುಗ್ದತೆ ಎಂದರೆ ಏನು? ಇದು ಯಾರಲ್ಲಿ ಕಾಣ ಸಿಗುತ್ತದೆ ಅಂತ ನೀವೇನಾದರೂ ನನ್ನನ್ನು ಪ್ರಶ್ನೆ ಮಾಡಿದರೆ ನಾನು ಸಾರಾ ಸಗಟಾಗಿ ಹೇಳುವ ಉತ್ತರ ಹಿಂದೆ ಹಳ್ಳಿಗಳಲ್ಲಿ ಅದರಲ್ಲಿಯೂ ವಿದ್ಯೆಯನ್ನು ಹುಡುಕುತ್ತಾ ಶಾಲೆಯ ಮೆಟ್ಟಿಲನ್ನು ಹತ್ತದೇ ತಮ್ಮ ಬದುಕಿನ ಶಾಲೆಯಲ್ಲಿಯೇ ಪಿ ಎಚ್ ಡಿ ಮುಗಿಸಿರುವ ಅಮಾಯಕರು. ಅಂತಹ ಜನ ಈಗ ಕಾಣ ಸಿಗುವುದು ಅಪರೂಪ ಎನ್ನಬಹುದು. ಅಲ್ಲೊಮ್ಮೆ ಇಲ್ಲೊಮ್ಮೆ ಇಂತವರು ಕಾಣ ಸಿಗುವುದು ಉಂಟು. ಇಲ್ಲಿ ಮುಗ್ಧತೆಯೇ ಇಂತಹ ಜನರಿಗೆ ಶಾಪವೇನೋ ಅಂತ ಆಗಾಗ ನನಗೆ ಅನ್ನಿಸುವುದುಂಟು. ಅಮ್ಮ ಆಗಾಗ ನನಗೆ ಹೇಳುತ್ತಿದ್ದರು ಮನುಷ್ಯನಲ್ಲಿ ಯಾವಾಗಲೂ ಪ್ರಬುದ್ಧತೆ ಇರಬೇಕು ಅಂತ. ಆದರೆ ಪ್ರಬುದ್ಧತೆಯು ಯಾವಾಗ ಬರುತ್ತದೆ. ನಮಗೆ ವಯಸ್ಸಾದಂತೆಲ್ಲ ಪಕ್ವತೆ ಬರುತ್ತದೆ ಎಂಬುದು ಒಂದು ನಂಬಿಕೆ. ಮುಪ್ಪು ಎಂಬುದು ಇಲ್ಲಿ ಪಕ್ವತೆಗೆ ಸಂಕೇತ. ಆದರೆ ಅದನ್ನು ನಾನು ಒಪ್ಪಿಕೊಳ್ಳಲು ಸಿದ್ದಳಿಲ್ಲ. ಅದೆಷ್ಟೋ ಜನರು ಅರವತ್ತರಲ್ಲೂ ಚೈಲ್ಡ್ ಗಳಂತೆ ಅಂದರೆ ಹುಡುಗು ಬುದ್ದಿ ತೋರಿಸುವುದನ್ನು ನಾವು ನೋಡುತ್ತೇವೆ. ಇನ್ನು ಕೆಲವರಂತೂ ಎಷ್ಟೇ ಓದಿಕೊಂಡಿದರೂ ತನ್ನ ಸಣ್ಣ ಬುದ್ದಿಯಿಂದ ಮಿರುಗುತಿರುತ್ತಾರೆ. ಅವರ ಮಾತುಗಳಲ್ಲಿ ಅವರ ಅಲ್ಪತನ ಎದ್ದು ಕಾಣಿಸುತ್ತಿರುತ್ತದೆ. ಅಂತವರಿಗೆ ಓದಿನಿಂದಲೋ, ವಯಸ್ಸಿನಿಂದಲೋ ಪಕ್ವತೆ ಅಥವಾ ಪ್ರಬುದ್ಧತೆ ಎಲ್ಲರಿಗೂ ಬರಲು ಸಾಧ್ಯವಿಲ್ಲ. ಹಾಗಾಗಿ ವಯಸ್ಸಿಗೂ ಪ್ರಬುದ್ಧತೆಗೂ ಎಲ್ಲಿಯ ಸಂಬಂದ? ಶರೀರಕ್ಕೆ ವಯಸ್ಸಾಗಿದೆ ಎಂದು ಹೇಳುವುದು ನಿಃಶಕ್ತಿಯನ್ನು ತೋರಿಸುತ್ತದೆ. ಆದರೆ ಮನಸ್ಸಿಗೆ ಮುಪ್ಪಾಗಿದೆ ಎನ್ನುವುದು ಮನಸ್ಸು ಸಾಧಿಸಿರುವ ಪ್ರೌಢತೆಗೆ ಸೂಚಕವಾಗುತ್ತದೆ. ಸಜ್ಜನರಲ್ಲಿ ಮೊದಲಿಗೆ ಮನಸ್ಸಿನಲ್ಲಿ ಮುಪ್ಪು ಮೂಡುತ್ತದೆಯಂತೆ. ಎಂದರೆ ಅವರಲ್ಲಿ ಮನಸ್ಸು ಮೊದಲಿಗೆ ಪ್ರಬುದ್ಧತೆಯನ್ನು ಪಡೆಯುತ್ತದೆ. ಅವರು ಎಳೆಯ ವಯಸ್ಸಿನಲ್ಲೇ ಪ್ರಬುದ್ಧತೆಯನ್ನು ಸಂಪಾದಿಸಿಕೊಂಡಿರುತ್ತಾರೆ. ಪ್ರಬುದ್ಧತೆ ಎಂದರೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಉತ್ತಮವಾಗಿ ಅಭಿವೃದ್ಧಿ ಹೊಂದುವುದು ಎನ್ನುವುದಾಗಿದೆ. ಪ್ರಬುದ್ಧತೆ ಹಾಗೇ ಸುಮ್ಮನೆ ಬರುವುದಿಲ್ಲ ಕಷ್ಟ, ಅನುಭವ, ನಮ್ಮ ಪರಿಸರಗಳಿಂದ ನಮಗೆ ಪ್ರಬುದ್ಧತೆ ಬರುತ್ತದೆ. ನಾವು ಬಹುತೇಕವಾಗಿ ಕ್ಷುಲ್ಲಕ ಸಂಗತಿಗಳಲ್ಲೆ ಮುಳುಗಿ ಹೋಗುತ್ತೇವೆ. ಅನಗತ್ಯವಾದ, ನಮ್ಮ ಬದುಕಿಗಾಗಲೀ ಪ್ರಗತಿಗಾಗಲೀ ಪೂರಕವಲ್ಲದ ಸಂಗತಿಗಳಿಗೆ ಪ್ರತಿಕ್ರಿಯಿಸುವುದರಲ್ಲಿ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಆದರೆ ಒಬ್ಬ ಪ್ರಬುದ್ಧ ವ್ಯಕ್ತಿ, ಸೋಲು, ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಹೊಗಳಿಕೆ ತೆಗಳಿಕೆಗಳಿಗೂ ಸಮಾನವಾಗಿ ಸ್ಪಂದಿಸುತ್ತಾನೆ. ಯಾರ ಕುರಿತಾಗಿಯೂ ಯಾವ ಸಂದರ್ಭದಲ್ಲಿಯೂ ಹಗುರಾಗಿ ಮಾತನಾಡುವುದಿಲ್ಲ. ತಾನು ಎಲ್ಲವನ್ನೂ ಬಲ್ಲವನೆಂಬ ಅಹಂಕಾರ ಪ್ರದರ್ಶನ ಮಾಡುವುದಿಲ್ಲ. ಪ್ರಬುದ್ಧ ಮನಸ್ಸುಗಳು ಯಾವತ್ತೂ ತನಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಅಂತಹ ಪ್ರಬುದ್ಧತೆ ಇದ್ದಾಗ ಮಾತ್ರ ಮನಸ್ಸು ಶಾಂತವಾಗಿರಲು ಸಾದ್ಯ ಎನ್ನುವುದನ್ನು ಮನಗಂಡು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗೋಣ...
✍ ಲಲಿತಶ್ರೀ ಪ್ರೀತಂ ರೈ