ಸರಕಾರಿ ಶಾಲೆಗಳಿಗೆ ಸರಕಾರ ಮಾಡಬೇಕಾದ ಹಲವು ಕೆಲಸವನ್ನು ನೆನಪಿಸುವಂತೆ ಉತ್ತಮ ಸಂದೇಶವಿಟ್ಟು ಮಾಡಿದ "ಸ್ಕೂಲ್ ಲೀಡರ್" ಕನ್ನಡ ಸಿನಿಮಾ 50 ದಿನ ಪೂರೈಸಿ ಮುನ್ನಡೆಯುತ್ತಿದೆ.
ಒಂದು ಸಾಧಾರಣ ಸರಕಾರಿ ಶಾಲೆಯಲ್ಲಿ ಇರುವಂಥ ಹಲವಾರು ಸಮಸ್ಯೆಗಳು, ಮುಖ್ಯವಾಗಿ ಶಿಕ್ಷಕರ ಕೊರತೆ ಮತ್ತು ಮಕ್ಕಳನ್ನು ಸರಿಯಾದ ದಾರಿಗೆ ತರಬಲ್ಲ ಗುರುವಿನ ಅವಶ್ಯಕತೆ ಚಿತ್ರದ ಜೀವಾಳ. ಯುವ ಶಿಕ್ಷಕರ ಹೊಸ ಅಲೋಚನೆಗಳು ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ತಯಾರು ಗೊಳಿಸಲು ಹೇಗೆ ಸಹಕಾರಿಯಾದೀತು ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಚಿತ್ರಕ್ಕೆ ಹಿನ್ನಲೆ ಸಂಗೀತ, ಸಾಹಿತ್ಯ ಮತ್ತು ಛಾಯಾಗ್ರಹಣ ಉತ್ತಮ ರೀತಿಯಲ್ಲಿ ಚಿತ್ರದಲ್ಲಿ ತೋರುತ್ತದೆ. ನಟಿಸಿದ ಹಿರಿಯ ನಟರು ಪ್ರಭುದ್ದರು ಮತ್ತು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಮಕ್ಕಳದ್ದೆ ಕಾರುಬಾರು. ಬೋಳಾರ್ ಪಾತ್ರ ಎಲ್ಲಾ ಸಿನಿಮಾಗಿಂತ ಅಚ್ಚುಕಟ್ಟಾಗಿ ಅಲ್ಲಲ್ಲಿ ಹಾಸ್ಯದ ಸಿಂಚನ ನೀಡುತ್ತಿತ್ತು. ದೀಪಕ್ ರೈ ಪಾಣಾಜೆಯ ಗಂಬೀರವಾದ ಅಭಿನಯ ಖುಷಿ ಕೊಡುತ್ತದೆ. ನಟಿಸಿದ ಪ್ರತಿ ಮಕ್ಕಳು ಅನುಭವಿಸಿ ನಟಿಸಿದ್ದಾರೆ. ಶಾಲೆಯಲ್ಲಿ ನಡೆಯುವ ಚುನಾವಣೆ, ಮಕ್ಕಳ ಹೈ ಸ್ಕೂಲ್ ರಾಜಕೀಯ, ರಾಜಕೀಯದಲ್ಲೂ ಮಾನವೀಯತೆ, ಪತ್ರ ವ್ಯವಹಾರದ ತಿರುವು, ಆಡಳಿತ ಮತ್ತು ವಿರೋಧ ಪಕ್ಷಗಳ ಕಾರ್ಯವೈಖರಿಯ ಜ್ಞಾನ ಮಕ್ಕಳಿಗೆ ಹೈಸ್ಕೂಲ್ ನಲ್ಲಿ ಸಿಕ್ಕರೆ ಹೇಗೆ ಎಂಬ ಸಂದೇಶ, ಒಂದು ಗೆಳೆಯರ ಗುಂಪು, ಅದರಲ್ಲಿರುವ ಒಬ್ಬ ಚೋಟು, ಜೊತೆಯಾಗಿ ನಡೆದರೆ ಒಗ್ಗಟ್ಟು, ಸರಕಾರಿ ಶಾಲೆಯ ಮಕ್ಕಳು ಸರಿಯಾಗಿ ಅವಕಾಶ ಸಿಕ್ಕರೆ ತಮ್ಮ ಪ್ರತಿಭೆ ತೋರಬಹುದು, ಈ ಎಲ್ಲಾ ವಿಷಯವನ್ನು ನಿರ್ದೇಶಕ ತಮ್ಮ ವ್ಯಾಪ್ತಿಯಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಾಸ್ಯ ಸನ್ನಿವೇಶ ನಗು ಚಟಾಕಿ ಹಾರಿಸುತ್ತದೆ. ಒಟ್ಟಾಗಿ ಚಿತ್ರ ಎಲ್ಲರಿಗೂ ತಮ್ಮ ಹೈಸ್ಕೂಲ್ ದಿನಗಳನ್ನು ನೆನಪಿಸುವುದಂತೂ ಖಂಡಿತ. ಕುಟುಂಬ ಸಮೇತರಾಗಿ ನೋಡಬಹುದಾದ ಒಳ್ಳೆಯ ಕನ್ನಡ ಚಲನಚಿತ್ರ ಇದಾಗಿದೆ.