ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಹಾಗೂ ನಟ ದಿನೇಶ್ ಮಂಗಳೂರು (Dinesh Mangaluru) ಅವರು ಕುಂದಾಪುರದಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ. 'ಆ ದಿನಗಳು', 'ಕೆಜಿಎಫ್' (KGF), 'ಉಳಿದವರು ಕಂಡಂತೆ', 'ಕಿಚ್ಚ', 'ಕಿರಿಕ್ ಪಾರ್ಟಿ' ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು.ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಕಲಾ ನಿರ್ದೇಶಕನಾಗಿರುವುದರ ಜೊತೆ ಬೇಡಿಕೆಯ ಪೋಷಕ ನಟನಾಗಿ ಅವರು ಗುರುತಿಸಿಕೊಂಡಿದ್ದರು. ದಿನೇಶ್ ಮಂಗಳೂರು ಅಗಲಿಕೆಗೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಬಣ್ಣದ ಲೋಕದಲ್ಲಿ ದಿನೇಶ್ ಮಂಗಳೂರು ಅವರು ಅಪಾರ ಅನುಭವ ಹೊಂದಿದ್ದರು.
'ಕಾಂತಾರ' ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು. ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟ ಮಂಗಳೂರು ದಿನೇಶ್ ಮರಣ ಹೊಂದಿದ್ದಾರೆ.
ದಿನೇಶ್ ಅವರು 1964ಜನಿಸಿದ್ದು, ದಿನೇಶ್ ದಿನೇಶ್ ಕೆವಿ ಪೈ ಎಂಬುದು ಅವರ ಮೂಲ ಹೆಸರು. ಚಿತ್ರರಂಗಕ್ಕೆ ಬಂದ ಬಳಿಕ ದಿನೇಶ್ ಮಂಗಳೂರು ಎಂಬ ಹೆಸರಿನಿಂದ ಗುರುತಿಸಿಕೊಂಡರು. ಕಾಲೇಜು ದಿನಗಳಿಂದಲೇ ಅವರು ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶನ ಮಾಡುತ್ತಿದ್ದು, ಅದರ ಜೊತೆ ಅಭಿನಯ ಕಲಿತು ಚಿತ್ರರಂಗಕ್ಕೆ ಕಾಲಿಟ್ಟವರು.