ಮಂಗಳೂರು: ಟೈಟಲ್ ನಿಂದಲೇ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿ, “ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ನಿರ್ದೇಶಕ ವಿನಾಯಕ್ ಇನ್ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದರು. ಅವರು ಹೇಳಿದ ಕಥೆ ಕೇಳಿ ಖುಷಿಯಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದೇನೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟು ನನ್ನನ್ನು ಬೆಳೆಸಿರುವ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ನನ್ನ ಗುರುಗಳು. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು ತುಳುವರು ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಹರಸಿ“ ಎಂದರು.
ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ಲಿಖಿತ್ ಶೆಟ್ಟಿ ನನ್ನ ಆತ್ಮೀಯರು. ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ತುಳುನಾಡಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಮಂದಿ ಸಾಧನೆ ಮಾಡಿದ ಕಲಾವಿದರಿದ್ದಾರೆ. ಕನ್ನಡಿಗರು ಮತ್ತು ತುಳುವರು ಒಟ್ಟು ಸೇರಿ ಸಿರ್ಮಿಸಿರುವ ಸಿನಿಮಾ ಇದಾಗಿದ್ದು ಎಲ್ಲರೂ ಹೊಸಬರ ಪ್ರಯತ್ನಕ್ಕೆ ಸಹಕಾರ ನೀಡಬೇಕು“ ಎಂದು ಮನವಿ ಮಾಡಿದರು.
ನಿರ್ದೇಶಕ ಎನ್.ವಿನಾಯಕ ಮಾತಾಡಿ, ”ನನ್ನ ಪ್ರತಿಭೆಯನ್ನು ಗುರುತಿಸಿ ಲಿಖಿತ್ ಶೆಟ್ಟಿ ಅವಕಾಶ ನೀಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ“ ಎಂದರು.
ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಮಾತಾಡಿ, ”ಫುಲ್ ಮೀಲ್ಸ್ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ, ಸುಮಧುರ ಪ್ರೇಮಕತೆ ಮತ್ತು ಮನೋರಂಜನೆಯ ಫುಲ್ ಮೀಲ್ಸ್ ಆಗಿದೆ. ಸಿನಿಮಾದ ಹಾಡುಗಳು ಮುದ ನೀಡುತ್ತಿದ್ದು ಸಿನಿಮಾವನ್ನು ಪ್ರೇಕ್ಷಕ ಇಷ್ಟಪಡಲು ಬೇಕಾದ ಎಲ್ಲ ಅಂಶಗಳು ಇದರಲ್ಲಿವೆ“ ಎಂದರು.