ಮಂಗಳೂರು : ಎಂಎನ್ಆರ್ ಪ್ರೊಡಕ್ಷನ್ ಸಂಸ್ಥೆಯ ಕನ್ನಡ ಸಿನಿಮಾ ‘ವಾದಿರಾಜ ವಾಲಗ ಮಂಡಳಿ’ ಚಿತ್ರ ಬ್ರಹ್ಮಾವರ ತೆಂಕು ಮನೆಯಲ್ಲಿ ನಾಲ್ಕನೇ ದಿನದ ಚಿತ್ರೀಕರಣ ನಡೆಯುತ್ತಿದ್ದು ಮೇ ತಿಂಗಳಿನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎಂದು ಚಿತ್ರದ ನಿರ್ಮಾಪಕರಾದ ಡಾ|ಎಮ್ ಎನ್ ರಾಜೇಂದ್ರ ಕುಮಾರ್ ಹೇಳಿದರು. ಅವರು ಬ್ರಹ್ಮಾವರದ ತೆಂಕು ಮನೆಯಲ್ಲಿ ಚಿತ್ರದಲ್ಲಿ ಮೆಹಂದಿ ಚಿತ್ರೀಕರಣದಲ್ಲಿ ಭಾಗವಹಿಸಿ ಮಾತನಾಡಿ, ಎಂಎನ್ಆರ್ ಪ್ರೊಡಕ್ಷನ್ ಸಂಸ್ಥೆಯ ಮೂರನೇ ಸಿನೆಮಾ ಇದಾಗಿದ್ದು, ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾರ್ಚ್ ವೇಳೆಗೆ ನಡೆದು ಮೇ ತಿಂಗಳಿನಲ್ಲಿ ತೆರೆ ಕಾಣಲಿದೆ. ಯುವ ನಿರ್ದೇಶಕ ಶಶಿರಾಜ್ ಕಾವೂರು ನಿರ್ದೇಶನದ “ವಾದಿರಾಜ ವಾಲಗ ಮಂಡಳಿ” ಸಿನೆಮಾ ಉತ್ತಮ ಕಥಾ ಹಂದರ ಹೊಂದಿದ್ದು, ಸಂಪೂರ್ಣ ಹಾಸ್ಯ ಪ್ರಧಾನ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಸಿನಿಮಾ.
ಈ ಸಿನಿಮಾದಲ್ಲಿ ಕಾಂತಾರ ಸಿನಿಮಾ ನಟರಾದ ಗೋಪಿನಾಥ್ ಭಟ್, ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ್ ತುಮಿನಾಡು. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್. ಮೈಮ್ ರಾಮದಾಸ್ ನಟಿಸಲಿದ್ದಾರೆ. ಸು ಫ್ರಂ ಸೋ ಸಿನಿಮಾದ ಕ್ಯಾಮರಾಮ್ಯಾನ್ ಚಂದ್ರಶೇಖರನ್, ನಿತಿನ್ ಶೆಟ್ಟಿ ಸಂಕಲನ, ರಾಜೇಶ್ ಬಂದ್ಯೋಡ್ ಅವರ ಕಲಾ ನಿರ್ದೇಶನ ಸಿನಿಮಾಗಿರಲಿದೆ. ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿ, ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್ ಶೆಟ್ಟಿ ಸಹಕರಿಸಲಿದ್ದಾರೆ. ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ, ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದರು. ಎಂಎನ್ಆರ್ ಪ್ರೊಡಕ್ಷನ್ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, “ ಜೋಗುಳ " ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ "ಜೀಕನ್ನಡ" ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಪ್ರತಿಭಾವಂತ ನಿರ್ದೇಶಕ ಎಂ.ಡಿ.ಶ್ರೀಧರ ಅವರ ನಿರ್ದೇಶನದಲ್ಲಿ "ಗಲಾಟೆ" ಎಂಬ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು, ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ "ಗಲಾಟೆ" ಚಲನಚಿತ್ರ ' ಎಂಎನ್ಆರ್ ಪ್ರೊಡಕ್ಷನ್' ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ. ಎಂಎನ್ಆರ್ ಪ್ರೊಡಕ್ಷನ್' ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ತುಳು ಸಿನೆಮಾ ಮುಹೂರ್ತ ಮಾಡಲಾಗಿದ್ದು. ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದೆ ಎಂದರು.
ಕರಾವಳಿಯ ಪ್ರತಿಭಾವಂತ ರಂಗಭೂಮಿ ಕಲಾವಿದರ ಮುಖ್ಯ ಭೂಮಿಕೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, 300 ವರ್ಷಗಳ ಇತಿಹಾಸವುಳ್ಳ ಬ್ರಹ್ಮಾವರ ತೆಂಕುಮನೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. 15 ದಿನಗಳ ಚಿತ್ರೀಕರಣದ ಬಳಿಕ ಮಂಗಳೂರು, ಅಲ್ಲಿಂದ ಟ್ರಾವೆಲ್ ಶೂಟಿಂಗ್ ಮಂಜೇಶ್ವರದಲ್ಲಿ ನಡೆಯಲಿದೆ. ನಿರ್ಮಾಪಕರು, ನಟರ ಸಹಕಾರವಿದ್ದು, 50 ದಿನದಲ್ಲಿ ಶೂಟಿಂಗ್ ಮುಗಿಸುತ್ತೇವೆ ಎಂದು ನಿರ್ದೇಶಕ ಶಶಿರಾಜ್ ರಾವ್ ಕಾವೂರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಘರಾಜ್ ಆರ್.ಜೈನ್, ಛಾಯಾಚಿತ್ರಗಾರ ಎಸ್.ಚಂದ್ರಶೇಖರನ್, ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ, ಸಹ ನಿರ್ಮಾಪಕರಾದ ಜಯಪ್ರಕಾಶ್ ತುಂಬೆ, ವಿನಯ್ ಕುಮಾರ್ ಸೂರಿಂಜೆ , ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು , ಮಹೇಶ್ ಹೆಗ್ಡೆ ಎಂ., ರವೀಂದ್ರ ಕಂಬಳಿ , ಕಾರ್ಯಕಾರಿ ನಿರ್ಮಾಪಕ ಸಂತೋಷ್ ಶೆಟ್ಟಿ, ನಟ ಗೋಪಿನಾಥ್ ಭಟ್ , ಸುನಿಲ್ ಕುಮಾರ್ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.