ಬೆಂಗಳೂರು: ಚಲನಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾಾತರು, ಮಹಿಳೆಯರು ಕುರಿತಾಗಿ ಚಿತ್ರಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು ಎಂದು ಹೇಳಿದರು.
ಈ ಚಿತ್ರೋತ್ಸವಗಳಿಂದ ಬೇರೆ ದೇಶಗಳ ಜನರ ಜೀವನ, ರಾಜಕೀಯ ಮತ್ತು ಸಮಾಜ ಅರ್ಥವಾಗುತ್ತದೆ. ಅಸಮಾನತೆ, ಸಮಾನತೆ ಅರ್ಥ ಮಾಡಿಕೊಳ್ಳುರವುದು ಅವಶ್ಯಕ. ಅದಕ್ಕೆ ಚಿತ್ರೋತ್ಸವ ಸುವರ್ಣಾವಕಾಶ ಒದಗಿಸುತ್ತದೆ. ಅದನ್ನು ಉಪಯುಕ್ತವಾಗಿ ಬಳಸಿಕೊಂಡು ಸಮಾಜದಲ್ಲಿ ಬದಲಾವಣೆ ತರಬೇಕು. ಬದಲಾವಣೆ ಆಗದಿದ್ದರೆ, ಸಿನಿಮಾ ಬರೀ ಮನರಂಜನೆಗೆ ಸೀಮಿತ ಆಗುತ್ತದೆ.
ನಾವು ಮನುಷ್ಯರು, ನಾವು ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿಯಿಂದ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬೇಧ, ಭಾವ, ಅಸಮಾನತೆ ಹೋಗಲಾಡಿಸುವ ಕೆಲಸ ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತದೆ. ಬದುಕನ್ನು ಹಸನು ಮಾಡುವ ಕೆಲಸ ಚಲನ ಚಿತ್ರಗಳು ಮಾಡಲಿ ಎಂದು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.
ಇಂದಿನಿಂದ ಫೆಬ್ರವರಿ 6 ರ ವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಸುಮಾರು 70 ದೇಶಗಳ ಆಯ್ದ ಸುಮಾರು 240 ಸಿನಿಮಾ ಪ್ರದರ್ಶನ ನಡೆಯಲಿದ್ದು, ದೇಶ-ವಿದೇಶಗಳ ಅಪರೂಪದ ಈ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವಿದೆ. ಜಗತ್ತಿನ ಪ್ರಸಿದ್ಧ ಜನಮನ್ನಣೆಗಳಿಸುರುವ 100 ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಹಾಗೂ 30 ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾತನಾಡಿ ಇಡಿ ದೇಶದಲ್ಲಿ ಹೆಮ್ಮೆ ಪಡುವಂತ ಕಾರ್ಯಕ್ರಮ ಈ ಚಲನಚಿತ್ರೋತ್ಸವ, ಕಲಾವಿದರ ಕುರಿತು ಮುಖ್ಯಮಂತ್ರಿಗಳಿಗೆ ಹೆಚ್ಚಿನ ಕಾಳಜಿ ಇದೆ. ಸಿನಿಮಾ ನೋಡುವಾಗ ಕನಿಷ್ಟ ನಾವು ನೆಮ್ಮದಿಯಿಂದ ಮೂರು ತಾಸು ಕಳೆಯುತ್ತೇವೆ, ಟಿವಿ ಮೋಬೈಲ್ ಗಳ ಹಾವಳಿಯಿಂದ ಇಂದು ಸಿನಿಮಾ ಕ್ಷೇತ್ರ ಸಮಸ್ಯೆಯಲ್ಲಿದೆ ಎಂದು ಹೇಳಿ ಹಳೆ ಸಿನಿಮಾಗಳನ್ನು ಸ್ಮರಿಸಿಕೊಂಡ ಅವರು ಈ ಚಿತ್ರೋತ್ಸದಲ್ಲಿ ಸಿನಿಮಾಗಳ ಪ್ರದರ್ಶನದ ಜೊತೆ ಸಿನಿಮಾ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಲಿ ಎಂದರು.
ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾಧ್ಯವಾದ ಸಹಾಯವನ್ನು ಹಾಗೂ ಸಹಕಾರವನ್ನು ನೀಡಲಾಗುವುದು. ಇಂತಹ ಕಾರ್ಯಕ್ರಮಗಳಲ್ಲಿ ನಡೆಯುವ ವಿಚಾರಗಳಿಗೆ ಸ್ಪಂದಿಸಲಾಗುವುದು, ಕಾರ್ಯಕ್ರಮ ಸಾರ್ಥಕತೆಗೆ ಶ್ರಮಿಸುವಂತೆ ಸಿನಿಮಾಸಕ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ ನಮ್ಮ ಸರ್ಕಾರದವತಿಯಿಂದ ಅದ್ಭುತವಾದ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ, ಸಿನಿಮಾ ಸಮಾಜದ ಒಂದು ಭಾಗ, ಪ್ರತಿ ವಿಷಯದಲ್ಲಿ ಸಿನಿಮಾ ಕೊಡುಗೆ ಅಪಾರವಾಗಿದೆ, ಎಷ್ಟೇ ಕಷ್ಟದಲ್ಲಿದ್ದರು ಸಹ ಜನರಿಗೆ ಸಿನಿಮಾ ಮನರಂಜನೆ ನೀಡುತ್ತದೆ, ಇದೊಂದು ಅತ್ಯಂತ ಪ್ರಭಾವಶಾಲಿ ಮಾಧ್ಯಮ ಆಗಿದ್ದು, ಸಿನಿಮಾ ಮುಖಾಂತರ ಮನುಷ್ಯ ಮತ್ತು ಮನುಷ್ಯತ್ವವನ್ನು ಬೆಸೆಯುವ ಕೆಲಸವಾಗಬೇಕು, ಸಿನಿಮಾ ಕ್ಷೇತ್ರ ಮರೆತಿರುವುದನ್ನು ಮತ್ತೇ ಮರುಕಳಿಸಲಿ, ಪ್ರಕಾಶ್ ರೈ ಕೇವಲ ನಟರಲ್ಲ ಅವರೊಬ್ಬ ಮಾನವೀಯ ಕಾಳಜಿಯುಳ್ಳ ಜವಾಬ್ಧಾರಿ ಯುತ ನಾಗರೀಕ ಎಂದು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 255 ಚಿತ್ರಗಳು ಪ್ರದರ್ಶನ ಹಮಿಕೊಂಡಿದ್ದು ಅದರಲ್ಲಿ 65 ಮಹಿಳಾ ನಿರ್ದೇಶಕರ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವವನ್ನು ಮಹಿಳೆಯರಿಗೆ ಅರ್ಪಿಸಿರುವುದು ಅತ್ಯಂತ ಗೌರವಯುತ ಕಾರ್ಯವಾಗಿದೆ. ಸರ್ಕಾರ ಚಿತ್ರದ್ಯೋಮಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಮುಖ್ಯವಾಗಿ ಮೈಸೂರಿನಲ್ಲಿ ಚಲನಚಿತ್ರ ನಗರಿ, ಅಕಾಡೆಮಿ ಕಟ್ಟಡದಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ , ಕನ್ನಡ ಚಿತ್ರಗಳಿಗಾಗಿ ಓಟಿಟಿ ಸೇರಿದಂತೆ ಚಲನ ಚಿತ್ರ ಕಾರ್ಮಿಕರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಬಾರಿಯ ವಿಶೇಷವೆಂದರೆ ಲುಲು ಮಾಲ್ ಆವರಣದಲ್ಲಿ ಪ್ರತಿದಿನಸಂಜೆ 7 ಗಂಟೆಗೆ ಟೆಂಟ್ ಸಿನಿಮಾ ಮಾದರಿಯಲ್ಲಿ ಓಪನ್ ಏರ್ ಥೇಟರ್ ನಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಚಲನ ಚಿತ್ರ ನಿರ್ಮಾಣ ಹಾಗೂ ಚಿತ್ರೀಕರಣಕ್ಕಾಗಿ ಸಂಬಂಧಿಸಿದಂತೆ ಅನುಮೋದನೆಗಳನ್ನು ಪಡೆಯಲು ಸಿಂಗಲ್ ವಿಂಡೋ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.
ಚಲನ ಚಿತ್ರೋತ್ಸವ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಮಾತನಾಡಿ ಈ ಬಾರಿಯ ವಿಶೇಷತೆಗಳನ್ನು ವಿವರಿಸಿದರು. ಕನ್ನಡ ಚಲನಚಿತ್ರದ ಸಾಧಕರ ಸಿನಿಮಾಯಾನವನ್ನು ಸಹ ಈ ಚಲನಚಿತ್ರೋತ್ಸವದಲ್ಲಿ ಸಂಭ್ರಮಿಸಲಾಗುತ್ತಿದೆ. ಇದೊಂದು ಸಿನಿಮಾ ಹಬ್ಬವಾಗಿದ್ದು ಎಲ್ಲರೂ ಭಾಗವಹಿಸಿ ಎಂದು ಹೇಳಿದರು.
ಈ ಬಾರಿಯ ಚಲನ ಚಿತ್ರೋತ್ಸವದ ರಾಯಭಾರಿ ಹಿರಿಯ ನಟ ಪ್ರಕಾಶ್ ರೈ ಮಾತನಾಡಿ ಸುಮಾರು 16 ವರ್ಷಗಳ ಹಿಂದೆ ನಾನು ಈ ಚಲನಚಿತ್ರೋತ್ಸವವನ್ನು ಉದ್ಘಾಟನೆ ಮಾಡಿದ್ದೆ ಎಂದು ಸ್ಮರಿಸಿಕೊಂಡ ಅವರು ಇದೊಂದು ರಂಗನತಿಟ್ಟು ಇದ್ದಂತೆ, ಅಲ್ಲಿಯಂತೆಯೇ ಇಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಸಿನಿಮಾ ಪಕ್ಷಿಗಳು ಸೇರುವುದು ವಿಶೇಷ ಎಂದರು.
ಅಂತರಾಷ್ಟ್ರೀಯ ಚಿತ್ರೋತ್ಸವ ಅಥವಾ ಸಾಹಿತ್ಯೋತ್ಸವಗಳು ಜನರ ಬದುಕು ಹಾಗೂ ಮನುಷ್ಯತ್ವವನ್ನು ಹಂಚಿಕೊಳ್ಳುವ ವೇದಿಕೆಗಳು. ಇಂತಹ ವೇದಿಕೆಗಳಿಗೆ ರಾಜಕೀಯ ಪ್ರವೇಶವಾಗಿರುವುದು ದುರಂತ, ಕೆಲದೇಶದ ಸಿನಿಮಾಗಳ ಪ್ರದರ್ಶನ ವನ್ನು ಕೇಂದ್ರ ಸರ್ಕಾರ ಅನುವ ಮಾಡಿಕೊಡದಿರುವುದನ್ನು ರಾಜ್ಯ ಸರ್ಕಾರ ಖಂಡಿಸಬೇಕು ಹಾಗೂ ಅದನ್ನು ವಿರೋಧಿಸುವ ಮೂಲಕ ನಮ್ಮ ಚಿತ್ರೋತ್ಸವಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪ್ಯಾಲೇಸ್ತೀನಿ ಸಿನಿಮಾಗಳನ್ನು ಬೆಂಬಲಿಸಿ ಕವನ ವಾಚನ ಮಾಡಿದ ಅವರು ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿದಾಮವನ್ನು ಹೋಲಿಸಿ ಮಾತನಾಡಿ ಇಂತಹ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದಂತೆ ಪ್ರತಿರೋಧವನ್ನು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಈ ಬಾರಿಯ ಚಲನಚಿತ್ರೋತ್ಸವದ ಸಿಗ್ನೇಚರ್ ಫಿಲ್ಮ್ ಬಿಡುಗಡೆ ಮಾಡಿದರು.
ಕಾಂತರ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ ಅವರು ಮಾತನಾಡಿ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ನನ್ನಂತ ಯುವನಟಿಯನ್ನು ಆಹ್ವಾನಿಸಿರುವುದು ನನಗೆ ಸಿಕ್ಕ ಸೌಭಾಗ್ಯ, ಬೆಂಗಳೂರು ಎಲ್ಲಾ ಕಲೆಗಳ ನೆಲೆ, ಸಿನಿಮಾ ಎಲ್ಲಾ ಕಲೆಯನ್ನು ಬಳಸಿಕೊಳ್ಳುವ ಮಾಧ್ಯಮ, ಎಲ್ಲಾ ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಮೂಲಕ ಸಿನಿಮಾಸಕ್ತರು ಕಲಿಯಲು ಇದೊಂದು ವೇದಿಕೆ. ಮುಖ್ಯವಾಗಿ ತಂತ್ರಜ್ಞರ ಹಾಗೂ ಸಿನಿಮಾ ಪ್ರಿಯರ ಸಿನಿಮಾ ವಿಷಯಗಳ ವಿನಿಮಯ ಅತ್ಯಂತ ಸಹಾಯಕವಾಗಲಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತ ಮಾಡಿ ಮಾತನಾಡಿ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸಲು ಕಾತರಿಸಿದ ಎಲ್ಲಾ ವೀಕ್ಷಕರು ಆನಂದಿಸುತ್ತಿದ್ದಾರೆ ಎನ್ನುವ ಭರವಸೆ ಇದೆ , ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾದ ಸಿನಿಮಾಗಳ ಕುರಿತು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ. ಹಿರಿಯ ನಟಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ ಹಾಗೂ ಹಿರಿಯ ನಟಿ ಮತ್ತು ಮಾಜಿ ಸಚಿವೆ ಡಾ. ಜಯಮಾಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ವಾರ್ತಾ ಇಲಾಖೆಯ ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ್ , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ಚೇತನ್ ಅಹಿಂಸ, ಪೂಜಾ ಗಾಂಧಿ, ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ಅನು ಪ್ರಭಾಕರ್, ರಘು ಮುಖರ್ಜಿ, ರಾಕ್ಲೈನ್ ವೆಂಕಟೇಶ್, ಸುಂದರ್ ರಾಜ್ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಉದ್ಘಾಟನಾ ವೇದಿಕೆಯಲ್ಲಿ ನೆದರ್ಲ್ಯಾಂಡ್ ದೇಶದ ‘ಪೋರ್ಟ್ ಬ್ಯಾಗೇಜ್’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಯಿತು.