ಬೆಂಗಳೂರು : 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಖ್ಯಾತ ಶಬ್ದ ವಿನ್ಯಾಸಕ (ಸೌಂಡ್ ಡಿಸೈನರ್) ಬಿಸ್ವದೀಪ್ ಚಟರ್ಜಿ ಅವರು 'ಸಿನಿಮಾ ಆಸ್ ಎ ವೇ ಆಫ್ ಲಿಸನಿಂಗ್' (ಕೇಳಿಸಿಕೊಳ್ಳುವ ಮಾರ್ಗವಾಗಿ ಸಿನಿಮಾ) ಎಂಬ ಮಾಸ್ಟರ್ ಕ್ಲಾಸ್ನಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಕೃತಿ, ಪರಿಸರ ಮತ್ತು ಅಕೌಸ್ಟಿಕ್ಸ್ (ಧ್ವನಿ ವಿಜ್ಞಾನ) ಕೇವಲ ಸಿನಿಮಾದ ಶಬ್ದ ವಿನ್ಯಾಸವನ್ನಷ್ಟೇ ಅಲ್ಲದೆ, ದೈನಂದಿನ ಜೀವನದಲ್ಲಿ ಜನರು ಕೇಳಿಸಿಕೊಳ್ಳುವ ಮತ್ತು ಸಂವಹನ ಮಾಡುವ ವಿಧಾನವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಅವರು ಈ ಸಂದರ್ಭದಲ್ಲಿ ಬೆಳಕು ಚೆಲ್ಲಿದರು. ʼ3 ಇಡಿಯಟ್ಸ್', ʼಬಾಜಿರಾವ್ ಮಸ್ತಾನಿ', ʼಉರಿ: ದಿ ಸರ್ಜಿಕಲ್ ಸ್ಟ್ರೈಕ್ʼ ಮತ್ತು ಇತ್ತೀಚಿನ ʼಧುರಂಧರ್ʼ ಅಂತಹ ಚಿತ್ರಗಳಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಚಟರ್ಜಿ, ಕೇಳಿಸಿಕೊಳ್ಳುವುದು ಎನ್ನುವುದು ಒಂದು ಸಾಂಸ್ಕೃತಿಕ ಮತ್ತು ಚಲನಚಿತ್ರ ಅಭ್ಯಾಸವಾಗಿ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು. ʼಸಾಂಸ್ಕೃತಿಕವಾಗಿ ಭಾರತೀಯರು ಸ್ವಲ್ಪ ಜೋರಾಗಿ ಮಾತನಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದ ಚಟರ್ಜಿ, ʼಇದು ನಾವು ವಾಸಿಸುವ ಭೌತಿಕ ಮತ್ತು ಸಾಮಾಜಿಕ ಪರಿಸರದಿಂದ ರೂಪುಗೊಂಡ ಗುಣವಾಗಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ಅಲ್ಲಿನ ತಂಪಾದ ಹವಾಮಾನ ಮತ್ತು ಶಾಂತವಾದ ಸುತ್ತಮುತ್ತಲಿನ ಪರಿಸರವು ಶಬ್ದದೊಂದಿಗೆ ವಿಭಿನ್ನ ಸಂಬಂಧವನ್ನು ಸೃಷ್ಟಿಸುತ್ತದೆʼ ಎಂದು ಅವರು ತಿಳಿಸಿದರು.
ʼಅನೇಕ ಪಾಶ್ಚಿಮಾತ್ಯ ನಗರಗಳಲ್ಲಿ ಮೌನವು ಸಾಮಾನ್ಯವಾಗಿದೆ. ಸುತ್ತುವರಿದ ಗದ್ದಲದ ಮಟ್ಟವು ಕಡಿಮೆಯಿರುತ್ತದೆ ಮತ್ತು ನಗರಾ ಯೋಜನೆಯು ಉತ್ತಮ ಅಕೌಸ್ಟಿಕ್ ಸಮತೋಲನವನ್ನು ಬೆಂಬಲಿಸುತ್ತದೆ. ಮೃದುವಾದ ಪೀಠೋಪಕರಣಗಳು, ಮರದ ನೆಲಹಾಸುಗಳು, ಕಾರ್ಪೆಟ್ಗಳು ಮತ್ತು ಸಂಸ್ಕರಿಸಿದ ಗೋಡೆಗಳು ಶಬ್ದವನ್ನು ಪ್ರತಿಧ್ವನಿಸುವ ಬದಲು ಹೀರಿಕೊಳ್ಳುತ್ತವೆ. ಇದರಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಶಾಂತವಾಗಿರುತ್ತವೆ ಮತ್ತು ಜನರು ಪರಸ್ಪರ ಕೇಳಿಸಿಕೊಳ್ಳಲು ತಮ್ಮ ಧ್ವನಿಯನ್ನು ಏರಿಸುವ ಅಗತ್ಯವಿರುವುದಿಲ್ಲʼ ಎಂದರು. ಧ್ವನಿ ವಿಜ್ಞಾನ ಅಥವಾ ಅಕೌಸ್ಟಿಕ್ಸ್ ಬಗ್ಗೆ ಇರುವ ಅರಿವಿನ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಚಟರ್ಜಿ ಒತ್ತಿ ಹೇಳಿದರು. ʼಕಟ್ಟಡಗಳು ಅಥವಾ ಸ್ಥಳಗಳನ್ನು ವಿನ್ಯಾಸಗೊಳಿಸುವಾಗ ಶಬ್ದದ ಬಗ್ಗೆ ಚಿಂತನಶೀಲವಾದ ಕ್ರಮಗಳನ್ನು ಕೈಗೊಂಡರೆ, ಅದು ಸ್ಪಷ್ಟತೆ ಮತ್ತು ಸಮಾಧಾನ ಎರಡನ್ನೂ ನಾಟಕೀಯವಾಗಿ ಸುಧಾರಿಸುತ್ತದೆʼ ಎಂದು ಅವರು ಅಭಿಪ್ರಾಯಪಟ್ಟರು. ಮಾತುಗಾರರು ಸಹಜವಾಗಿ ಹೇಗೆ ಬದಲಾಗುತ್ತಾರೆ ಎಂಬುದರ ಕುರಿತು ಸಾಮ್ಯತೆಯನ್ನು ನೀಡುತ್ತಾ, ʼಜನರು ಗದ್ದಲದ ನಡುವೆ ತಮ್ಮ ಮಾತು ಕೇಳಿಸುವಂತೆ ಮಾಡಲು ಅರಿವಿಲ್ಲದೆಯೇ ಧ್ವನಿಯನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆʼ ಎಂಬುದನ್ನು ಅವರು ವಿವರಿಸಿದರು.
ʼಅನುಭವಿ ಮಾತುಗಾರರು ಜೋರಾಗಿ ಕಿರುಚುವ ಬದಲು, ಧ್ವನಿಯ ಏರಿಳಿತ (ಪಿಚ್) ಮತ್ತು ತರಂಗಾಂತರವನ್ನು (ಫ್ರೀಕ್ವೆನ್ಸಿ) ಸರಿಹೊಂದಿಸುತ್ತಾರೆ, ಇದರಿಂದ ಅವರ ಧ್ವನಿಯು ಒತ್ತಡವಿಲ್ಲದೆ ಸ್ಪಷ್ಟವಾಗಿ ಸಂವಹನವಾಗುತ್ತದೆ. ಇದೇ ತತ್ವವು ಸಿನಿಮಾದಲ್ಲಿ ಶಬ್ದದ ಧ್ವನಿಮುದ್ರಣ ಮತ್ತು ಮಿಕ್ಸಿಂಗ್ಗೆ ಮೂಲಾಧಾರವಾಗಿದೆʼ ಎಂದು ಅವರು ಹೇಳಿದರು. ʼಶಬ್ದ ವಿನ್ಯಾಸಕರು ತರಂಗಾಂತರಗಳನ್ನು ಎಚ್ಚರಿಕೆಯಿಂದ ರೂಪಿಸುತ್ತಾರೆ, ಇದರಿಂದಾಗಿ ಹಿನ್ನೆಲೆ ಗದ್ದಲವು ಕೇಳುಗರನ್ನು ಹಿಂಸಿಸದಂತೆ ಸಂಭಾಷಣೆಗಳು ಮತ್ತು ಪ್ರಮುಖ ಶಬ್ದಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಮನುಷ್ಯರು ಹೇಗೆ ಕೇಳಿಸಿಕೊಳ್ಳುತ್ತಾರೆ ಮತ್ತು ಪರಿಸರವು ಶಬ್ದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯೇ ಶಬ್ದ ವಿನ್ಯಾಸʼ ಎಂದು ಚಟರ್ಜಿ ಬಣ್ಣಿಸಿದರು. ʼಧ್ವನಿಯನ್ನು ಹದಗೊಳಿಸುವುದಾಗಲಿ, ಬೇಡದ ತರಂಗಾಂತರಗಳನ್ನು ಫಿಲ್ಟರ್ ಮಾಡುವುದಾಗಲಿ ಅಥವಾ ಚಿತ್ರದ ಸೌಂಡ್ ಟ್ರ್ಯಾಕ್ಗಳನ್ನು ಪದರಗಳಾಗಿ ಜೋಡಿಸುವುದಾಗಲಿ, ಎಲ್ಲದರ ಗುರಿ ಒಂದೇ. ಗೊಂದಲವಿಲ್ಲದ ಸ್ಪಷ್ಟತೆ. ಸಿನಿಮಾ ತನ್ನ ಅತ್ಯುತ್ತಮ ರೂಪದಲ್ಲಿ ಪ್ರೇಕ್ಷಕರಿಗೆ ಕೇವಲ ಹೇಗೆ ನೋಡುವುದು ಎಂಬುದನ್ನು ಮಾತ್ರವಲ್ಲದೆ, ಹೇಗೆ ಕೇಳಿಸಿಕೊಳ್ಳಬೇಕು ಎಂಬುದನ್ನು ಸಹ ಕಲಿಸುತ್ತದೆʼ ಎಂದು ಅವರು ಮುಕ್ತಾಯಗೊಳಿಸಿದರು. ಇದು ಚಲನಚಿತ್ರಗಳಲ್ಲಿ ಮತ್ತು ಪರದೆಯ ಆಚೆಗಿನ ಜೀವನದಲ್ಲಿ ಶಬ್ದ, ಸ್ಥಳಾವಕಾಶ ಮತ್ತು ಮೌನದ ಬಗ್ಗೆ ಆಳವಾದ ಅರಿವನ್ನು ಮೂಡಿಸುತ್ತದೆ. ತಮ್ಮ ಮಾಸ್ಟರ್ಕ್ಲಾಸ್ನಲ್ಲಿ ಅವರು ತಾವು ಕೆಲಸ ಮಾಡಿದ ಚಿತ್ರಗಳ ಕೆಲವು ಭಾಗಗಳನ್ನು ಪ್ರದರ್ಶಿಸಿದರು ಮತ್ತು ಶಬ್ದ ವಿನ್ಯಾಸವು ದೃಶ್ಯದ ಹಿನ್ನೆಲೆ ಮತ್ತು ಸ್ಥಳವನ್ನು ಸ್ಥಾಪಿಸುವಲ್ಲಿ ಹಾಗೂ ಕಥೆ ಹೇಳುವಿಕೆಗೆ ಆಳವನ್ನು ನೀಡುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು.