ಉಪ್ಪಿನಂಗಡಿ: ಶಾಸಕನಾಗಿ ಎರಡು ವರ್ಷದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಎರಡು ಸಾವಿರದ ಆರು ಕೋ.ರೂ. ಅನುದಾನವನ್ನು ತಂದಿದ್ದೇನೆ. ಇತಿಹಾಸದಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯಲಿವೆ. ಆದರೆ ಬಿಜೆಪಿಯವರು ಸುಳ್ಳು ಮತ್ತು ಧರ್ಮದ ರಾಜಕಾರಣ ಮಾಡುವ ಮೂಲಕ ಜನರ ಮನಸ್ಸನ್ನು ಪರಿವರ್ತಿ ಸುವ ಕೆಲಸ ಮಾಡುತ್ತಿದ್ದು, ರಾಜಕೀಯ ರಹಿತವಾಗಿ ಕ್ಷೇತ್ರದ ಅಭಿವೃದ್ಧಿಯ ಮೂಲಕವೇ ಇದಕ್ಕೆ ತಕ್ಕ ಉತ್ತರ ನೀಡುವ ಕೆಲಸ ಕಾಂಗ್ರೆಸ್‌ನಿಂದಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿಯಲ್ಲಿ ನಡೆದ `ಬಿಜೆಪಿಯ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ'ವೆಂಬ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಳ್ಳುಗಳನ್ನೇ ಹೇಳುತ್ತಾ ಹೋದರೆ ಜನರ ಮನಸ್ಸು ಕೂಡಾ ಪರಿವರ್ತನೆ ಆಗುವುದು ಸಹಜ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಕೊಡುಗೆಯೇನು ಎಂಬುದನ್ನು ಜನತೆಗೆ ಮನವರಿಕೆ ಮಾಡುವ ಕಾರ್ಯ ಮಾಡಬೇಕು. ಹಿಂದುತ್ವ ಹಿಂದುತ್ವ ಎಂದು ಬೊಬ್ಬಿಡುವ ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸರಕಾರಿ ಜಾಗದಲ್ಲಿರುವ ಎಷ್ಟು ದೇವಸ್ಥಾನಗಳ, ಭಜನಾ ಮಂದಿರಗಳ, ದೈವಸ್ಥಾನಗಳ ಜಾಗವನ್ನು ಆಯಾಯ ಧಾರ್ಮಿಕ ಮಂದಿರಗಳ ಹೆಸರಿಗೆ ಮಾಡಿಕೊಟ್ಟಿದ್ದಾರೆ? ಇವರ ಬಾಯಲ್ಲಿ ರಾಜಕೀಯವೆಂದರೆ ಕೇವಲ ಓಟ್‌ಗಾಗಿ ಮಾತ್ರನಾ? ನಾನು ಶಾಸಕನಾಗಿ ಈ ಕೆಲಸಕ್ಕೆ ಕೈ ಹಾಕಿದ್ದು, ಮುಂಬರುವ ದಿನಗಳಲ್ಲಿ ಸರಕಾರಿ ಜಾಗದಲ್ಲಿರುವ ಹಿಂದೂ, ಮುಸಲ್ಮಾನ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಜಾಗಗಳನ್ನು ಆಯಾಯ ಧಾರ್ಮಿಕ ಕೇಂದ್ರಗಳ ಹೆಸರಿಗೆ ಮಾಡಿಕೊಡುತ್ತೇನೆ. ನಾನು ಯಾವತ್ತೂ ರಾಜಕೀಯ ರಹಿತವಾಗಿ ಅಭಿವೃದ್ಧಿಯ ರಾಜಕೀಯ ಮಾಡುತ್ತೇನೆಯೇ ಹೊರತು, ಬಿಜೆಪಿಯವರಂತೆ ಸುಳ್ಳಿನ, ಧರ್ಮದ ರಾಜಕೀಯ ಮಾಡಲ್ಲ. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಗೆ 352 ಕೋ.ರೂ. ಅನುದಾನವನ್ನು ತಂದಿದ್ದೇನೆ. ಇಲ್ಲಿನ ಮಸೀದಿಯ ಬಳಿಯೂ ತಡೆಗೋಡೆ ಕಟ್ಟಲು ಅನುದಾನವನ್ನು ನೀಡಿದ್ದೇನೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ತಂದಿದ್ದೇನೆ. ಬೀರಮಲೆ ಗುಡ್ಡ ಅಭಿವೃದ್ಧಿ ಮಾಡಿದ್ದೇನೆ. ನಿವೇಶನವಿಲ್ಲದವರಿಗೆ ನಿವೇಶನಕ್ಕೆಂದು 12 ಗ್ರಾಮಗಳಲ್ಲಿ 300 ಎಕರೆಯಷ್ಟು ಜಾಗವನ್ನು ಮೀಸಲಿರಿಸಿದ್ದೇನೆ. ಇದರಲ್ಲಿ 2 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ ಆಗಲಿದೆ. ಪುತ್ತೂರಿನಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣಕ್ಕೆಂದು 75 ಕೋ.ರೂ. ಅನುದಾನ ತಂದಿದ್ದೇನೆ. ಲಂಚ ಕೊಡದ ಕಾರಣ ಬಾಕಿ ಉಳಿದ ಜನರ 94 ಸಿ, ಅಕ್ರಮ ಸಕ್ರಮವನ್ನು ರಾಜಕೀಯ ರಹಿತವಾಗಿ ಯಾವುದೇ ಭ್ರಷ್ಟಾಚಾರವಿಲ್ಲದೆ ಮಾಡಿಕೊಟ್ಟಿ ದ್ದೇನೆ. ಹೀಗೆ ಕ್ಷೇತ್ರದ ಜನತೆಯನ್ನು ಧರ್ಮ, ಪಕ್ಷದ ಆಧಾರದಲ್ಲಿ ವಿಂಗಡಿಸದೇ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದೇನೆ. ಅದು ಬಿಟ್ಟು ಬಿಜೆಪಿಯವರಂತೆ ಕೀಳು ಮಟ್ಟದ ರಾಜಕೀಯ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.