image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಇಲ್ಲವೇ ಸಿ ದರ್ಜೆ ನೌಕರರೆಂದು ಪರಿಗಣಿಸಿ : ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

ನಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಇಲ್ಲವೇ ಸಿ ದರ್ಜೆ ನೌಕರರೆಂದು ಪರಿಗಣಿಸಿ : ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

ಮಂಗಳೂರು : ಅಂಗನವಾಡಿ ಕೆಲಸದ ಜತೆಗೆ ಕಳೆದ 18 ವರ್ಷಗಳಿಂದ ಬಿಎಲ್‌ಒ ಕರ್ತವ್ಯವನ್ನು ನಿರ್ವಹಿಸಲು ಅಸಾಧ್ಯವಾಗಿದ್ದು, ನಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಇಲ್ಲವೇ ಸಿ ದರ್ಜೆ ನೌಕರರೆಂದು ಪರಿಗಣಿಸಿ ಎಂದು ಮಂಗಳೂರು ನಗರದ ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಆಶಾಲತಾ ಎಂ.ವಿ., ವಾರ್ಷಿಕವಾಗಿ ಬಿಎಲ್‌ಒ ಕೆಲಸಕ್ಕೆ 7000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಕೈಯಿಂದ ದುಡ್ಡು ಖರ್ಚು ಮಾಡಿ ಈ ಕೆಲಸ ನಿರ್ವಹಿಸುವ ಪರಿಸ್ಥಿತಿ ನಮ್ಮದಾಗಿದೆ. ರಾಜೀನಾಮೆ ನೀಡುತ್ತೇವೆ ಎಂದರೆ ಪ್ರೋತ್ಸಾಹ ಧನ ಹೆಚ್ಚು ಮಾಡುವ ಭರವಸೆ ಮಾತ್ರವೇ ಸಿಗುತ್ತದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಇಲಾಖೆಯಿಂದ ಸಿ ದರ್ಜೆ ನೌಕರರನ್ನು ಬಿಎಲ್‌ಒ ಕರ್ತವ್ಯಕ್ಕೆ ನೇಮಿಸಕಬೇಕೆಂದು ಆದೇಶವಾಗಿದೆ. ಆದರೆ ಮಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ಕ್ಷೇತ್ರದಿಂದಲೇ ಸಿ ದರ್ಜೆ ನೌಕರರ ಪಟ್ಟಿ ನಮ್ಮಿಂದಲೇ ಪಡೆದುಕೊಂಡಿದ್ದರೂ, ವಿಎ ಅವರು ಹೆಚ್ಚಿನ ಕಡೆಗಳಲ್ಲಿ ಸಿ ದರ್ಜೆ ನೌಕರ ಪಟ್ಟಿ ಕಡೆಗಣಿಸಿ ಒತ್ತಾಯ ಪೂರ್ವಕವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ ಕರ್ತವ್ಯದ ಆದೇಶ ನೀಡಿದ್ದಾರೆ. ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮೂರರಿಂದ 6 ವರ್ಷಗಳ ಒಳಗಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ, 40 ದಾಖಲಾತಿಗಳು, ತಾಯಂದಿರ ಸಭೆ, ಪೌಷ್ಟಿಕ ಆಹಾರ ಕಾರ್ಯಕ್ರಮ, ಬಾಲ ವಿಕಾಸ ಸಮಿತಿ ಸಭೆ, ಪೋಷಣಾ ಅಭಿಯಾನ ಕಾರ್ಯಕ್ರಮ ಇದರ ಜತೆಗೆ ಪೋಷಣಾ ಟ್ರಾಕ್ಟರ್‌ನಲ್ಲಿ ಕೇಂದ್ರದ ಮಕ್ಕಳ ಎಲ್ಲಾ ಮಾಹಿತಿ ಒದಗಿಸಬೇಕು. ಈಗ ಮನೆಗೆ ಆಹಾರ ವಿತರಣೆ ಮಾಡುವ ಫಲಾನುಭವಿಗಳ ಇಕೆವೈಸಿ, ಫೇಸ್ ಕ್ಯಾಪ್ಟರ್ ಮಾಡಬೇಕು. ಈ ಸಂದರ್ಭ ಪ್ರತಿ ಫಲಾನುಭವಿಗಳ ಒಟಿಪಿ ಕೇಳುವಾಗ ಅನೇಕ ಸಮಸ್ಯೆ ಎದುರಾಗುತ್ತಿದೆ. ಫೇಸ್ ಕ್ಯಾಪ್ಟ‌ರ್ ವ್ಯವಸ್ಥೆ ಬಂದ ಬಳಿಕ ಫಲಾನುಭವಿಗಳು ಕೇಂದ್ರದಿಂದ ಆಹಾರ ಪಡೆಯಲು ಇಷ್ಟಪಡುವುದಿಲ್ಲ. ಇತಂಹ ಸಂದರ್ಭದಲ್ಲಿ ಕಾರ್ಯಕರ್ತೆಯರಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ದೂರಿದರು.

ಅಂಗನವಾಡಿ ಮೂಲಕ ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿ ಜಾರಿಯಲ್ಲಿರುವ 'ಪೋಷಣ್‌ ಆ್ಯಪ್‌ನ ಮಾಹಿತಿಗಳು ಸೋರಿಕೆಯಾಗಿರುವ ಅನುಮಾನವಿದೆ. ಮಾತೃ ವಂದನಾ ಫಲಾನುಭವಿಗಳಿಗೆ ಅಪರಿಚಿತ ವ್ಯಕ್ತಿಗಳಿಂದ ದೂರವಾಣಿ ಕರೆ ಬರುತ್ತಿದ್ದು, ಫಲಾನುಭವಿಗಳಿಗೆ 20000 ರೂ. ಮತ್ತು 12000 ರೂ. ಸಿಗುತ್ತಿದ್ದು ಅದಕ್ಕಾಗಿ ಇಲಾಖೆಗೆ 4598 ರೂ.ಗಳನ್ನು ಗೂಗಲ್ ಪೇ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಕರೆ ಮಾಡುವವರು ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಹೇಳುತ್ತಿರುವುದರಿಂದ ಕೆಲವರು ಹಣ ಪಾವತಿ ಮಾಡಿ ಮೋಸ ಹೋಗುತ್ತಿದ್ದಾರೆ. ಈ ರೀತಿ ಹಣ ಪಾವತಿ ಮಾಡುತ್ತಿರುವರ ಖಾತೆಯಲ್ಲಿದ್ದ ಬಾಕಿ ಹಣವನ್ನು ಲಪಟಾಯಿಸಲಾಗುತ್ತಿದ್ದು ಮಂಗಳೂರಿನಲ್ಲಿ ಹಲವು ಇಂತಹ ಪ್ರಕರಣಗಳು ನಡೆದಿವೆ. ಈ ಬಗ್ಗೆ ಅಂಗನವಾಡಿ ಕೇಂದ್ರಗಳಿಂದ ಫಲಾನುಭವಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ, ಕೆಲವೊಂದು ಫಲಾನುಭವಿಗಳು ಅರಿವಿಲ್ಲದೆ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆಶಲತಾ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರಿಯರ ಸಂಘದ ಪದಾಧಿಕಾರಿಗಳಾದ ಸುಜಾತ ರೈ, ಸುಜಾತ ಶೆಟ್ಟಿ, ಭವಾನಿ, ಜಯಶ್ರೀ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ