image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಂಪುಕಲ್ಲು, ಮರಳಿಲ್ಲದೆ ನಿರ್ಮಾಣ ಕ್ಷೇತ್ರ ಸ್ಥಗಿತ: ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ನಿಂದ ಪ್ರತಿಭಟನೆಯ ಎಚ್ಚರಿಕೆ

ಕೆಂಪುಕಲ್ಲು, ಮರಳಿಲ್ಲದೆ ನಿರ್ಮಾಣ ಕ್ಷೇತ್ರ ಸ್ಥಗಿತ: ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ನಿಂದ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಂಪು ಕಲ್ಲು ಹಾಗೂ ಮರಳು ಲಭ್ಯವಾಗದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದಾಗಿ ನಿರ್ಮಾಣ ಕಾರ್ಮಿಕರ ಜತೆಗೆ ಈ ಉದ್ಯಮವನ್ನು ನಂಬಿರುವ ಇತರ ಕ್ಷೇತ್ರದ ಉದ್ಯಮಿಗಳು ಆರ್ಥಿಕವಾಗಿ ತೊಂದರೆಗೀಡಾಗಿದ್ದಲ್ಲದೆ, ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ನೀಡಿರುವ ಭರವಸೆಯಂತೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟರಿ ತಿಳಿಸಿದ್ದಾರೆ. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ನೈಸರ್ಗಿಕ ಸಂಪತ್ತಾದ ಉತ್ಕೃಷ್ಟ ಗುಣಮಟ್ಟದ ಮರಳು ಹಲವು ವರ್ಷಗಳಿಂದ ಲಭ್ಯವಾಗದೆ ಗುತ್ತಿಗೆದಾರರು ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದೀಗ ಒಂದೂವರೆ ತಿಂಗಳಿನಿಂದ ಕಾನೂನಿನ ನೆಪವೊಡ್ಡಿ ಕೆಂಪು ಮುರಕಲ್ಲಿನ ಗಣಿಗಾರಿಕೆ ನಿರ್ಬಂಧಿಸಿರುವ ಕಾರಣ ಮತ್ತಷ್ಟು ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಬಗ್ಗೆ ಹಲವು ವರ್ಷಗಳಿಂದ ಸರಕಾರ ಪ್ರತಿನಿಧಿಗಳು ಹೇಳುತ್ತಾ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೆಂಪ ಕಲ್ಲು ಕೂಡಾ ಇದೀಗ ಅಲಭ್ಯವಾಗಿದ್ದು, ನಿರ್ಮಾಣ ಕ್ಷೇತ್ರದಲ್ಲಿ ತಲ್ಲಣವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಮಹಡಿ ಮನೆಗಳನ್ನು ಕಾಂಕ್ರಿಟ್ ಪಿಲ್ಲರ್ ಇಲ್ಲದೆ ಕೆಂಪು ಕಲ್ಲು ಬಳಸಿ ನಿರ್ಮಿಸುತ್ತಿರುವುದರಿಂದ ಮಧ್ಯಮ ಹಾಗೂ ಬಡ ವರ್ಗದ ಜನರ ಮನೆಯ ಕನಸಿಗೆ ತೊಂದರೆಯಾಗಿದೆ. ಗುತ್ತಿಗೆದಾರರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ದುಡಿಮೆಯ ಪಾಲನ್ನು ಭರಿಸುತ್ತಿದ್ದೇವೆ. ಇದೀಗ ನಮ್ಮ ಜಿಲ್ಲೆಯ ಕಾರ್ಮಿಕ ವರ್ಗವಲ್ಲದೆ, ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರು ಕೂಡಾ ಕೆಲಸವಿಲಲದೆ ಉಪವಾಸ ಬೀಳುವ ಪರಿಸ್ಥಿತಿ ಬಿಂದಿದೆ. ಇದು ಹೀಗೇ ಮುಂದುವರಿದರೆ ಜಿಲ್ಲೆಯ ಆರ್ಥಿಕತೆಗೆ ಪರಿಣಾಮ ಬೀರಲಿದೆ. ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಗಮನ ಸೆಳೆಯಲಾಗಿದ್ದು, ಸಚಿವ ಸಂಪುಟ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅದಕ್ಕಾಗಿ ನಾವು ಎದುರು ನೋಡುತ್ತಿದ್ದು, ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಿನಕರ್ ಸುವರ್ಣ, ಅಶೋಕ್ ಕುಲಾಲ್, ಲಕ್ಷ್ಮಿ ಪ್ರಸಾದ್, ಸುರೇಶ್ ಜೆ, ಸತೀಸ್ ಕುಮಾರ್ ಮತ್ತು ಚಂದನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ