ಮಂಗಳೂರು : ವಿಜ್ಞಾನ ಮತ್ತು ತಂತ್ರಜ್ಞಾನ, ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ತರಗತಿ ಗಳಿಗೆ ಪ್ರವೇಶಾತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪಠ್ಯಕ್ರಮಗಳ ಪರಿಷ್ಕಣೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2025-26ನೆ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಮಾಡಲಾಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹಾಗೂ ನಿರ್ವಹಿಸುವ ಸಂಬಂಧ ರಚಿಸಲಾಗಿರುವ ಅಧ್ಯಯನ ಮಂಡಳಿಯಲ್ಲಿ ಪಠ್ಯಕ್ರಮ ಪರಿಷ್ಕರಣೆಗೆ ಸಲ್ಲಿಕೆಯಾಗಿತ್ತು. ಈ ಬಗ್ಗೆ ಜುಲೈ 1ರಿಂದ 3ರವರೆಗೆ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ, ಕಲಾ ಮತ್ತು ವಾಣಿಜ್ಯ ನಿಕಾಯಗಳ ಸಭೆಯಲ್ಲಿ ಈ ಪರಿಷ್ಕೃತ ಪಠ್ಯಕ್ರಮಗಳನ್ನು ಸಲ್ಲಿಕೆಯಾಗಿದ್ದು, ತಿದ್ದುಪಡಿಗಳನ್ನು ಸೂಚಿಸಿ ಅನುಮೋದನೆ ಪಡೆಯಲಾಗಿದೆ. ಅದರಂತೆ ಮೂರು ನಿಕಾಯಗಳ ಒಟ್ಟು 24 ವಿಷಯಗಳಿಗೆ ಸಂಬಂಧಿಸಿ ಪಠ್ಯಕ್ರಮ ಪರಿಷ್ಕರಣೆಗೊಳಿಸಲಾಗಿದೆ ಎಂದು ಪ್ರೊ. ಧರ್ಮ ಸಭೆಗೆ ತಿಳಿಸಿದರು.
ಸ್ನಾತಕೋತ್ತರ ವ್ಯವಹಾರ ಆಡಳಿತ ಕಾರ್ಯಕ್ರಮ ತೃತಿಯ ಮತ್ತು ಚತುರ್ಥ ಸೆಮಿಸ್ಟರ್ ಹೊಸ ಸಾಫ್ಟ್ ಕೋರ್ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ಪರಿಷ್ಕರಣೆಗೊಳಿಸಲಾಗಿದೆ. ಇದೇ ವೇಳೆ ರಾಜ್ಯ ಶಿಕ್ಷಣ ನೀತಿ ಆಯೋಗದ ಮಾರ್ಗಸೂಚಿಯನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ, ನಿಕಾಯ, ಕಲಾ ನಿಕಾಯ, ವಾಣಿಜ್ಯ ನಿಕಾಯಗಳ ವ್ಯಾಪ್ತಿಗೊಳಪಡುವ ಪದವಿ ಕಾರ್ಯಕ್ರಮಗಳ ಪಠ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು. ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಹಾಗೂ ಹೆಚ್ಚಿನ ವಿದ್ಯಾ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ತಿದ್ದುಪಡಿಯ ಅಗ್ಯವಾಗಿದೆ. ಅದರಂತೆ ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯಯ ಸಭೆಯಲ್ಲಿ ಅನುಮೋದನೆ ಪಡೆದಿರುವ ತಿದ್ದುಪಡಿಯನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸುವುದಾಗಿ ಕುಲಪತಿ ತಿಳಿಸಿದರು.
"2025-26ನೆ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ತರತಿಗಳನ್ನು ಆಗಸ್ಟ್ 2ನೆ ವಾರದೊಳಗೆ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯ ಸರಕಾರದಿಂದ ಏಕರೂಪದ ವೇಳಾಪಟ್ಟಿ ಹಾಗೂ ಪಠ್ಯಕ್ರಮ ಅನುಸರಣೆಯ ಸೂಚನೆಯನ್ನೂ ಎದುರು ನೋಡಲಾಗುತ್ತಿದೆ. ಪ್ರಸಕ್ತ ಸಾಲಿನ ಪದವಿ ಹಾಗೂ ಸ್ನಾತ ಕೋತ್ತರ ಪದವಿ ತರಗತಿಗಳ ಪರೀಕ್ಷೆಗಳು ಜುಲೈನಲ್ಲಿ ಪೂರ್ಣಗೊಳ್ಳಲಿವೆ. ಪದವಿ ತರಗತಿಗಳ 6ನೆ ಸೆಮಿಸ್ಟರ್‌ನ ಫಲಿತಾಂಶವನ್ನು ಆದಷ್ಟು ಶೀಘ್ರದಲ್ಲಿ ಘೋಷಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದರು.