ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಕೆ.ಎಂ.ಸಿ ಕಾಯ್ದೆಯಡಿ ಕಡ್ಡಾಯವಾಗಿ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಬೇಕಾಗಿರುತ್ತದೆ. ಕಟ್ಟಡ ಪರವಾನಿಗೆಯನ್ನು ಪಡೆದ ನಂತರ ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಿ ಕಟ್ಟಡ ಪ್ರವೇಶ ಪತ್ರ ಪಡೆದ ನಂತರ ಕಟ್ಟಡವನ್ನು ಉಪಯೋಗಿಸಬೇಕಾಗಿರುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕಟ್ಟಡ ಪ್ರವೇಶ ಪತ್ರ ಪಡೆಯದ ಕಟ್ಟಡಗಳಿಗೆ ಯಾವುದೇ ರೀತಿಯ ಸೇವಾ ಸಂಪರ್ಕಗಳಾದ ವಿದ್ಯುತ್ ಸಂಪರ್ಕ , ನೀರು ಸರಬರಾಜು, ಒಳಚರಂಡಿ ಸಂಪರ್ಕ, ಟ್ರೇಡ್ ಲೈಸೆನ್ಸ್ ನೀಡಬಾರದು ಎಂದು ತಿಳಿಸಲಾಗಿದೆ.
ಆದ್ದರಿಂದ ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡವನ್ನು ನಿರ್ಮಿಸುವ ಮೊದಲು ಕಡ್ಡಾಯವಾಗಿ ಕಟ್ಟಡ ಪರವಾನಿಗೆಯನ್ನು ಪಡೆದು ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಬೇಕು. ತಪ್ಪಿದಲ್ಲಿ ಯಾವುದೇ ರೀತಿಯ ಸೇವಾ ಸಂಪರ್ಕಗಳನ್ನು ನೀಡಲಾಗುವುದಿಲ್ಲ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಕೆ.ಎಂ.ಸಿ ಕಾಯ್ದೆಯಡಿ ಕ್ರಮವಹಿಸಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.