image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಣಿಪಾಲದಲ್ಲಿ ಸಮರ್ಪಕ ಯುಜಿಡಿ ವ್ಯವಸ್ಥೆ ಮಾಡುವಂತೆ ನಾಗರಿಕರ ಮನವಿ

ಮಣಿಪಾಲದಲ್ಲಿ ಸಮರ್ಪಕ ಯುಜಿಡಿ ವ್ಯವಸ್ಥೆ ಮಾಡುವಂತೆ ನಾಗರಿಕರ ಮನವಿ

ಉಡುಪಿ: ಮಣಿಪಾಲ ಪ್ರದೇಶದಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲದೆ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ತ್ಯಾಜ್ಯ ನೀರಿನ ಹೊಂಡದಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಲ್ಯಾಟರೆಟ್ ಶಿಲೆಯ ಪ್ರದೇಶವಾಗಿರುವುದರಿಂದ ನೀರು ಇಂಗುವುದಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಕೊಳಚೆ ನೀರನ್ನು ಚರಂಡಿಗೆ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಣಿಪಾಲದ ಅಪಾರ್ಟ್‌ಮೆಂಟ್ ನಿವಾಸಿಗಳು ಅಳಲು ತೋಡಿಕೊಂಡರು. ಕೊಳಚೆ ನೀರು ನಿರ್ವಹಣೆ ಕುರಿತು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ಬಿಲ್ಡರ್‌ಗಳಿಗೆ ನಗರಸಭೆಯು ವಸತಿ ಸಮುಚ್ಚಯ ನಿರ್ಮಿಸಲು ಪರವಾನಗಿ ನೀಡುತ್ತದೆ. ಅವರು ತ್ಯಾಜ್ಯ ನೀರು ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಮಾಡದ ಕಾರಣ ವಸತಿ ಸಮುಚ್ಚಯ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಗಿದೆ ಎಂದರು. 'ನಗರಸಭೆಯವರು ವಸತಿ ಸಮುಚ್ಚಯ ನಿವಾಸಿಗಳಿಗೆ ನೋಟಿಸ್‌ ಕೊಟ್ಟು ಹೆದರಿಸುವುದಲ್ಲ, ಬಿಲ್ಡರ್‌ಗಳನ್ನು ಹಿಡಿಯಿರಿ, ₹40 ಲಕ್ಷ, ₹50 ಲಕ್ಷಕ್ಕೆ ಫ್ಲ್ಯಾಟ್ ಖರೀದಿಸಿದವರು ತಿಂಗಳಿಗೆ ₹3 ಸಾವಿರ ನಿರ್ವಹಣಾ ವೆಚ್ಚ ನೀಡಬೇಕಾಗಿದೆ. ನಗರಸಭೆಯೇ ಸಮರ್ಪಕ ಒಳಚರಂಡಿ ಮತ್ತು ಎಸ್‌ಟಿಪಿ ವ್ಯವಸ್ಥೆ ಮಾಡಬೇಕು' ಎಂದು ಬಹುತೇಕರು ಒತ್ತಾಯಿಸಿದರು.

ದೊಡ್ಡ ಐಷಾರಾಮಿ ವಸತಿ ಸಮುಚ್ಚಯದವರಲ್ಲಿಗೆ ಅಧಿಕಾರಿಗಳು ಹೋಗುವುದಿಲ್ಲ ಸಣ್ಣ ಸಣ್ಣ ಫ್ಯಾಟ್‌ಗಳಲ್ಲಿರುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದರು. ಸಂತೆಕಟ್ಟೆಯಲ್ಲಿ ಹಲವು ವಸತಿ ಸಮುಚ್ಚಯಗಳಿದ್ದರೂ ಒಳಚರಂಡಿ ವ್ಯವಸ್ಥೆ ಇಲ್ಲ. ಅದರಿಂದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಪರಿಹರಿಸಲು ನಗರಸಭೆ ಮುಂದಾಗಬೇಕು ಎಂದು ಆ ಭಾಗದ ಫ್ಲ್ಯಾಟ್ ನಿವಾಸಿಗಳು ಸಭೆಯಲ್ಲಿ ಒತ್ತಾಯಿಸಿದರು. ವಿ.ಪಿ. ನಗರದಲ್ಲಿ ₹ 75 ಲಕ್ಷ ಖರ್ಚು ಮಾಡಿ ತ್ಯಾಜ್ಯ ನೀರು ಹರಿಸಲು ನಾವೇ ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ ಮಾಡಿದ್ದೇವೆ. ಈಗ ಅದರ ನಿರ್ವಹಣೆಯನ್ನೂ ನಾವೇ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕೆಲವರು ದೂರಿದರು. ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ನಗರದ ವಿವಿಧೆಡೆ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು ಕೊಳಚೆ ನೀರನ್ನು ನೇರವಾಗಿ ಮಳೆ ನೀರು ಹರಿಯುವ ಚರಂಡಿಗೆ ಬಿಡುವುದರಿಂದ ಸಮೀಪದ ಮನೆಗಳ ಬಾವಿ ನೀರು ಕಲುಷಿತವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

Category
ಕರಾವಳಿ ತರಂಗಿಣಿ