image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆದಿ ದ್ರಾವಿಡ ಜಾತಿಯನ್ನು ಪಟ್ಟಿಯಿಂದ ಕೈಬಿಟ್ಟಲ್ಲಿ ಕಾನೂನು ಹೋರಾಟ

ಆದಿ ದ್ರಾವಿಡ ಜಾತಿಯನ್ನು ಪಟ್ಟಿಯಿಂದ ಕೈಬಿಟ್ಟಲ್ಲಿ ಕಾನೂನು ಹೋರಾಟ

ಮಂಗಳೂರು : ಪರಿಶಿಷ್ಟ ಜಾತಿ ಪಟ್ಟಿಯ 101 ಉಪ ಜಾತಿಗಳಲ್ಲಿ ಸೇರಿರುವ ಆದಿದ್ರಾವಿಡ ಉಪ ಜಾತಿಯನ್ನು ಕೈಬಿಡದೆ ಅದರಂತೆಯೇ ಒಳ ಮೀಸಲಾತಿ ಜಾರಿಗೆ ತರಬೇಕು. ಆದಿ ದ್ರಾವಿಡ ಜಾತಿಯನ್ನು ಪಟ್ಟಿಯಿಂದ ಕೈಬಿಟ್ಟಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಆದಿ ದ್ರಾವಿಡ ಸಮನ್ವಯ ಸಮಿತಿ ಎಚ್ಚರಿಸಿದೆ. ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಸೀನ ಮಾಸ್ತಿಕಟ್ಟೆ, ಸಮಿತಿಯ ವತಿಯಿಂದ ಈಗಾಗಲೇ ಮುಖ್ಯಮಂತ್ರಿ ಹಾಗೂ ನಿವೃತ್ತ ನ್ಯಾಯಾಧೀಶ ಎಚ್‌.ಎನ್‌. ನಾಗಮೋಹನ್ ದಾಸ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದಿ ದ್ರಾವಿಡ ಉಪಜಾತಿಯನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೂ ಕೈಬಿಡುವ ಪ್ರಯತ್ನಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರಕಾರ ಅಂತಹ ನಡೆಗೆ ಮುಂದಾದರೆ ಈ ಬಗ್ಗೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಕಳೆದ 75 ವರ್ಷಗಳಿಂದಲೂ ಪರಿಶಿಷ್ಟ ಜಾತಿಯಲ್ಲಿ ಉಪ ಜಾತಿಯಾಗಿ ಆದಿ ದ್ರಾವಿಡ ಜಾತಿ ಇದೆ. ಇದೀಗ ಈ ಜಾತಿಯನ್ನು ಪಟ್ಟಿಯಿಂದ ಕೈಬಿಟ್ಟರೆ ಸರಕಾರದ ವಿವಿಧ ಇಲಾಖೆಗಳಾದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಾದ ಮನಪಾ, ಪುರಸಭೆ, ನಗರಸಭೆ, ನಗರ ಪಂಚಾಯತ್ ಹಾಗೂ ಗ್ರಾಪಂಗಳಲ್ಲಿ ಸಿಗುತ್ತಿದ್ದ ವಿವಿಧ ಸವಲತ್ತು ಮತ್ತು ಶೈಕ್ಷಣಿಕ ಸವಲತ್ತುಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಸರಕಾರಿ ಉದ್ಯೋಗಿಗಳು ಮುಂಭಡ್ತಿ ಪಡೆಯಲು ಅಸಾಧ್ಯವಾಗುತ್ತದೆ ಎಂದು ಹೇಳಿದರು. 1950ರಲ್ಲಿ ರಾಷ್ಟ್ರಪತಿಯಿಂದ ಬಿಡುಗಡೆಯಾದ 101 ಉಪಜಾತಿಗಳ ಪಟ್ಟಿಯಲ್ಲಿ ಆದಿ ದ್ರಾವಿಡ ಹೆಸರಿದೆ. ಸಂವಿಧಾನದ 341ರ ವಿಧಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳು ಸೇರ್ಪಡೆಯಾಗಿದ್ದು, ಸರಕಾರದಿಂದ ಲಭ್ಯವಿರುವ ಶೇ.15ರಂತೆ ಸರಕಾರಿ ಸವಲತ್ತುಗಳನ್ನು ಈ ಜಾತಿಗಳು ಪಡೆಯುತ್ತಿವೆ. ಆದರೆ ಇತ್ತೀಚೆಗೆ ಅಂಬೇಡ್ಕ‌ರ್ ನಿಗಮದಲ್ಲಿ ನಮ್ಮ ಸಮುದಾಯದವರು ಅರ್ಜಿ ಹಾಕಿದಾಗ ಈ ಸೌಲಭ್ಯ ನಮ್ಮವರಿಗೆ ಲಭ್ಯವಿಲ್ಲ ಎಂದಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ ಪಾಂಡೇಶ್ವರ ಆಕ್ಷೇಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಪಿ.ಆನಂದ, ಕಾರ್ಯದರ್ಶಿ ಬಿ.ಜಿನ್ನಪ್ಪ ಬಂಗೇರ, ಕೋಶಾಧಿಕಾರಿ ಬಿ.ಕೆ.ಸುರೇಶ್, ಮಂಗಳೂರು ತಾಲೂಕು ಅಧ್ಯಕ್ಷ ನಾಗೇಶ್‌ ಬಳ್ಳಾಲ್ಟಾಗ್, ಉಳ್ಳಾಲ ತಾಲೂಕು ಅಧ್ಯಕ್ಷ ನಾರಾಯಣ, ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಚಂಡ್ತಿಮಾ‌ರ್, ಮೂಡುಬಿದಿರೆ ಅಧ್ಯಕ್ಷ ಸತೀಶ್ ಕಲ್ಲಮುಂಡ್ಯೂರು ಉಪಸ್ಥಿತರಿದ್ದರು. 

Category
ಕರಾವಳಿ ತರಂಗಿಣಿ