image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬುರುಡೆ ಕಥೆಗೆ ಹೊಸ ತಿರುವು : ಬುರುಡೆ ದೂರುದಾರ ತೋರಿಸದ ಜಾಗದಲ್ಲಿ ಅಸ್ತಿಪಂಜರ ಪತ್ತೆ

ಬುರುಡೆ ಕಥೆಗೆ ಹೊಸ ತಿರುವು : ಬುರುಡೆ ದೂರುದಾರ ತೋರಿಸದ ಜಾಗದಲ್ಲಿ ಅಸ್ತಿಪಂಜರ ಪತ್ತೆ

ಧರ್ಮಸ್ಥಳ : ನೇತ್ರಾವತಿ ತೀರದಲ್ಲಿ ನಡೆಯುತ್ತಿರುವ ವಿಶೇಷ ತನಿಖಾ ತಂಡ ನಡೆಸುತ್ತಿರುವ ಶೋಧ ಕಾರ್ಯ ಸೋಮವಾರ ಭಾರೀ ತಿರುವು ಪಡೆದುಕೊಂಡಿದ್ದು, 6ನೇ ದಿನದ ಕಾರ್ಯಾಚರಣೆ ವೇಳೆ ಹೊಸ ಜಾಗದಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿರುವ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಳಲಾಗಿದೆ ಎನ್ನಲಾದ ಮೃತದೇಹಗಳನ್ನು ಪತ್ತೆಹಚ್ಚುವ ಪ್ರಯತ್ನ ಸೋಮವಾರವೂ ಮುಂದುವರಿಯಿತು. ಇಲ್ಲಿಯವರೆಗೆ, ಸಾಕ್ಷಿ ದೂರುದಾರ ತೋರಿಸಿದ 10 ಸ್ಥಳಗಳನ್ನು ಅಧಿಕಾರಿಗಳು ಕ್ರಮವಾಗಿ ಅಗೆದು ಪರಿಶೀಲಿಸಿದ್ದರು. ಇಂದು 11ನೇ ಸ್ಥಳದಲ್ಲಿ ಉತ್ಪನನ ನಡೆಸುವ ನಿರೀಕ್ಷೆಯಿತ್ತು. ಆದರೆ, ಅಧಿಕಾರಿಗಳ ತಂಡವು ಆ ಸ್ಥಳವನ್ನು ಅಗೆಯುವ ಬದಲು, ಸಾಕ್ಷಿ ದೂರುದಾರನೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಹೆದ್ದಾರಿ ಬದಿಯ ಕಾಡಿಗೆ ತೆರಳಿದೆ. ದೂರುದಾರನನ್ನು ಕಾಡಿನೊಳಗೆ ಮತ್ತಷ್ಟು ಒಳಕ್ಕೆ ಕರೆದೊಯ್ದಿದೆ. ಇಲ್ಲಿ ಕಳೆದ ನಾಲ್ಕು ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು ಇಲ್ಲಿ ಮನುಷ್ಯನ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಎಸ್‌ಐಟಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಡಿನೊಳಗೆ ಪ್ರವೇಶಿಸಿರುವ ಎಸ್‌ಐಟಿ ತಂಡವು ನಿರಂತರವಾಗಿ ಉತ್ಪನನ ನಡೆಸುತ್ತಿದೆ. ನಾಲ್ವರು ಶಸ್ತ್ರಸಜ್ಜಿತ ಪೊಲೀಸರೂ ಜೊತೆಗೆ ತೆರಳಿದ್ದಾರೆ. ಇಲ್ಲಿಗೆ ಎರಡು ಚೀಲ ಉಪ್ಪನ್ನು ಕೊಂಡೊಯ್ಯಲಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಸುಮಾರು 20 ಕಾರ್ಮಿಕರನ್ನು ಬಳಸಿಕೊಂಡು ಶೋಧ ಕಾರ್ಯ ಭರದಿಂದ ಸಾಗಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಈ ಹಿಂದೆ, ಬುರುಡೆ ದೂರುದಾರನು ಮೃತದೇಹಗಳನ್ನು ಹೂಳಲಾಗಿದೆ ಎಂದು ಹೇಳಿ ಒಟ್ಟು 13 ಸ್ಥಳಗಳನ್ನು ವಿಶೇಷ ತನಿಖಾ ತಂಡಕ್ಕೆ ತೋರಿಸಿದ್ದ. ಕಳೆದ ಶೋಧಗಳಲ್ಲಿ ದೂರುದಾರ ಗುರುತಿಸಿದ್ದ ಆರನೇ ಸ್ಥಳದಲ್ಲಿ ಮಾತ್ರ ಪುರುಷನೊಬ್ಬನ ಮೃತದೇಹದ ಅವಶೇಷಗಳು ಪತ್ತೆಯಾಗಿತ್ತು. ಉಳಿದ ಒಂಬತ್ತು ಸ್ಥಳಗಳಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ. ಆದರೆ ಇದೀಗ ಭಾನುವಾರದ ವಿರಾಮದ ನಂತರ ಸೋಮವಾರ ನಿಗದಿತ ಸ್ಥಳವನ್ನು ಬಿಟ್ಟು ಹೊಸ ಸ್ಥಳವನ್ನು ಎಸ್‌ಐಟಿ ಅಗೆದಿದ್ದು, ಇಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ. ಈ ಮೂಲಕ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದ್ದು, ಬುರುಡೆ ಪ್ರಕರಣ ಕುತೂಹಲ ಹೆಚ್ಚಿಸುತ್ತಿದೆ.

Category
ಕರಾವಳಿ ತರಂಗಿಣಿ