ಮಂಗಳೂರು : ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಜಾಲತಾಣ ಮಾಧ್ಯಮಗಳು ಜೊತೆ ಜೊತೆಯಾಗಿಯೇ ಸಾಗಬೇಕು. ಅವು ಪರಸ್ಪರ ಕಚ್ಚಾಡುವುದಲ್ಲ, ಅವುಗಳ ಸುದ್ದಿ ಆದ್ಯತೆ ಮತ್ತು ಶೈಲಿ ಬೇರೆ ಬೇರೆಯಾಗಿದ್ದರೂ ಅವುಗಳು ಒಂದಕ್ಕೊಂದು ಪೂರಕವಾಗಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ. ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸಮಾರೋಪದಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು. ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಸೋಶಿಯಲ್ ಮೀಡಿಯಾಗಳ ಪೂರ್ವಯೋಜಿತ ಪ್ರಚಾರಗಳೇ ಜಾಸ್ತಿಯಾಗುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾಗಿದೆ ಎಂದರು. ಕೃತಕಬುದ್ಧಿಮತ್ತೆ(ಎಐ) ಭವಿಷ್ಯದ ಪತ್ರಿಕೋದ್ಯಮವಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪರಿಣಾಮಕಾರಿಯಾಗಿ ರೂಪುಗೊಳ್ಳಲಿದೆ. ಈ ಬೆಳವಣಿಗೆ 'ಪತ್ರಿಕೋದ್ಯಮ'ವನ್ನು 'ಮೀಡಿಯಾ ಟೆಕ್(ಮಾಧ್ಯಮ ತಂತ್ರಜ್ಞಾನ) ಆಗಿ ಬದಲಾಯಿಸಿದೆ. ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿ ಕೊಳ್ಳಬೇಕು ಈಗ ಯಾರೂ ಪತ್ರಿಕೋದ್ಯಮ ಎಂದು ಕರೆಯುವುದಿಲ್ಲ ಮೀಡಿಯಾ ಟೆಕ್ ಎನ್ನುತ್ತಾರೆ.
ಪತ್ರಿಕೆ ಹಂಚಲು, ಓದಲು ಪರ್ಯಾಯ ಮಾಧ್ಯಮವನ್ನು ಜನತೆ ನೆಚ್ಚಿಕೊಳ್ಳುತ್ತಿದೆ. ಡಿಜಿಟಲ್ ವೇದಿಕೆ ಮೂಲಕ ಸುದ್ದಿ ಸಾಕಷ್ಟು ವೈರಲ್ ಆಗುತ್ತಿರುವ ಈ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೆ ದೊಡ್ಡ ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದವರು ಈಗ ಸಣ್ಣ ಪಾಡ್‌ಕಾಸ್ಟ್‌ಗಳ ಮೂಲಕ ಪ್ರಪಂಚದ ಗಮನ ಸೆಳೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮೀಡಿಯಾ ಟೆಕ್ ಬದಲಾಗುತ್ತಿದೆ ಎಂದರು. ಮಾಧ್ಯಮ ರಂಗ ಪ್ರಮುಖವಾಗಿ ನಾಲ್ಕು ಸಮಸ್ಯೆಗಳನ್ನು ಎದುರಿಸುತ್ತಿದೆ ಡಿಜಿಟಲ್ ಮಾಧ್ಯಮ ಕೀಳುಮಟ್ಟ ತಲುಪಿದೆ. ಇನ್ನೊಬ್ಬರನ್ನು ಕೊಲೆ ಮಾಡುವ ಸ್ಥಿತಿಗೆ ಜಾಲತಾಣಗಳಲ್ಲಿ ಕಾಮೆಂಟ್ಸ್‌ಗಳು ಪೋಸ್ಟ್ ಆಗುತ್ತಿವೆ. ಫೇಕ್ ಸುದ್ದಿಗಳು ಹುಡುಕಿಕೊಂಡು ಬರುತ್ತಿದ್ದು ಆತಂಕಕಾರಿಯಾಗಿ ಪಸರಿಸುತ್ತಿದೆ. ಶೇ.70ರಷ್ಟು ಫೇಕ್ ಸುದ್ದಿಗಳೇ ಆಗಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದರು. ಪೂರ್ವನಿಯೋಜಿತ ಪ್ರಚಾರ(ಪ್ರೊಪಗಾಂಡ) ಪತ್ರಿಕೋದ್ಯಮಕ್ಕೆ ದೊಡ್ಡ ಗಂಡಾಂತರವಾಗಿದೆ. ಸುಳ್ಳು ಸುದ್ದಿಯನ್ನು ಹಲವು ಸಲ ಹೇಳಿ ಅದನ್ನೇ ಸತ್ಯ ಎಂದು ಸಮಾಜವನ್ನು ನಂಬಿಸುವ ಭ್ರಮೆ ಆವರಿಸುತ್ತಿದೆ. ಮಾಧ್ಯಮಗಳು ಟಿಆರ್‌ಪಿ ಹಾಗೂ ಆದಾಯಕ್ಕಾಗಿ ಏನೇನೋ ಮಾಡಬೇಕಾಗಿದೆ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಆತ್ಮವಿಮರ್ಶೆ ಮಾಡಿ ಹೆಜ್ಜೆ ಇಡಬೇಕಾಗಿದೆ. ಸುದ್ದಿ ಮಾಧ್ಯಮಕ್ಕೆ ಮುಖ್ಯವಾಗಿ ಬೇಕಾಗಿದ್ದು ವಿಶ್ವಾಸಾರ್ಹತೆಯೇ ಹೊರತು ಬೇರೇನಲ್ಲ ಎಂದರು.