ಮಂಗಳೂರು:ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸಂಸ್ಥೆ ಕೆನರಾ ಇಂಜಿನಿಯರಿಂಗ್ ಕಾಲೇಜು (CEC), ತನ್ನ ಶೈಕ್ಷಣಿಕ ಪ್ರವಾಸದಲ್ಲಿ ಮತ್ತೊಂದು ಇತಿಹಾಸಾತ್ಮಕ ಸಾಧನೆ ಸಾಧಿಸಿದ್ದು, ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomous Status) ಲಭಿಸಿದೆ ಎಂದು ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಎಂ ರಂಗನಾಥ್ ಬಟ್ ಹೇಳಿದರು. ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ಇದು ಭವಿಷ್ಯದ ಉದ್ಯೋಗಯೋಗ್ಯ ವಿದ್ಯಾರ್ಥಿಗಳನ್ನು ರೂಪಿಸಲು ಹಾಗೂ ಶೈಕ್ಷಣಿಕ ಸ್ವಾತಂತ್ರ್ಯ ಮತ್ತುಬದ್ಧತೆಯನ್ನು ಹೆಚ್ಚಿಸುತ್ತದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇದರ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಶೀಲಿಸಿ ಈ ಮಾನ್ಯತೆಯನ್ನು ಮಂಜೂರು ಮಾಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿಯ ಶಿಫಾರಸು ಮೇರೆಗೆ ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಈ ಸ್ಥಾನಮಾನ ಲಭಿಸಿತು.
ಸ್ವಾಯತ್ತ ಸ್ಥಾನಮಾನದಿಂದಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜು ಈಗ ಮುಂದೆ ಸ್ವತಂತ್ರವಾಗಿ ಪಠ್ಯಕ್ರಮ ರೂಪಿಸಿ ಜಾರಿಗೆ ತರಲು, ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ಹೊಸ ಕೋರ್ಸ್‌ಗಳನ್ನು ಪರಿಚಯಿಸಲು,ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ,ಬೆಳಗಾವಿಗೆ ಸಂಬಂಧಿತವಿರುವುದನ್ನು ಮುಂದುವರಿಸುತ್ತಲೇ, ಕಾಲೇಜು ಈಗ ಶೈಕ್ಷಣಿಕವಾಗಿ ಇನ್ನಷ್ಟು ಚುರುಕಾಗಿದ್ದು, ತಂತ್ರಜ್ಞಾನ ಹಾಗೂ ಉದ್ಯಮ ಲೋಕದ ಬೇಡಿಕೆಗೆ ತಕ್ಕಂತೆ ಶಿಕ್ಷಣ ನೀಡಲು ಸದಾ ಸಜ್ಜಾಗಿದೆ. ಈ ಮಹತ್ವದ ಸಾಧನೆಯು ಕಾಲೇಜಿನ ಗುಣಮಟ್ಟದ ಶಿಕ್ಷಣ, ನಾವೀನ್ಯತೆ ಹಾಗೂ ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಯ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ. ಕಾಲಕ್ರಮೇಣ CEC ವಿವಿಧ ಗುಣಮಟ್ಟದ ಮಾನ್ಯತೆಗಳನ್ನು ಸಂಪಾದಿಸಿದೆ ಎಂದರು.