image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೆನ್‍ಲಾಕ್‍ನಲ್ಲಿ ಪೊಲೀಸ್ ಔಟ್ ಪೋಸ್ಟ್ : ಉಸ್ತುವಾರಿ ಸಚಿವರ ಸೂಚನೆ

ವೆನ್‍ಲಾಕ್‍ನಲ್ಲಿ ಪೊಲೀಸ್ ಔಟ್ ಪೋಸ್ಟ್ : ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ವೆನ್‍ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರೊಂದಿಗೆ ಸಭೆ ನಡೆಸಿದರು.

ವೆನ್‍ಲಾಕ್ ಆಸ್ಪತ್ರೆಯ ವಿವಿಧ ಅಭಿವೃದ್ಧಿ ವಿಷಯದ ಹೊಸ ಪ್ರಸ್ತಾವಣೆ ಬಗ್ಗೆ ಚರ್ಚಿಸಿ, ಕಳೆದ ಮೂರು ವರ್ಷಗಳಿಂದ ವೆನ್‍ಲಾಕ್ ಜಿಎನ್‍ಎಮ್ ನರ್ಸಿಂಗ್ ವಿದ್ಯಾರ್ಥಿನಿಯರ   ಸ್ಟೈಪೆಂಡ್ ಹಣ ಬಿಡುಗಡೆ ಮಾಡುವಂತೆ ಸದಸ್ಯರು ವಿನಂತಿಸಿದ ಕೂಡಲೇ ಸಚಿವರು ಆಯುಕ್ತರಿಗೆ ತಕ್ಷಣ ಬಿಡುಗಡೆಗೊಳಿಸುವಂತೆ ಸೂಚಿಸಿದರು. ಇತ್ತೀಚೆಗೆ ವರ್ಗಾವಣೆಗೊಂಡು ತೆರವಾದ ವಿವಿಧ ಶ್ರೇಣಿಯ ವೈದ್ಯರು ಮತ್ತು ಸ್ಟಾಪ್ ನರ್ಸ್‍ಗಳ ಖಾಲಿ ಹುದ್ದೆಯನ್ನು ಭರ್ತಿಗೊಳಿಸುವಂತೆ ಸದಸ್ಯರು ಆಗ್ರಹಿಸಿದಾಗ ಸಚಿವರು ಆಯುಕ್ತರಿಗೆ ಭರ್ತಿ ಮಾಡಲು ನಿರ್ದೇಶಿಸಿದರು. ವೆನ್‍ಲಾಕ್‍ಗೆ ಅತೀ ಹೆಚ್ಚು ವಿದ್ಯುತ್ ಬಿಲ್ ಬರುವುದರಿಂದ  ಇಡೀ ಆಸ್ಪತ್ರೆಗೆ ಸೋಲಾರ್ ವ್ಯವಸ್ಥೆಯನ್ನು ಮಾಡಲು ಸದಸ್ಯರು ಬೇಡಿಕೆ ಇಟ್ಟಾಗ ಆಯುಕ್ತರಿಗೆ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಿದರು. ಆಸ್ಪತ್ರೆಗೆ ಸುಮಾರು 13 ಜಿಲ್ಲೆಗಳಿಂದ ರೋಗಿಗಳು ದಾಖಲಾಗಲು ದಿನದ 24 ಗಂಟೆಯು ಬರುತ್ತಿದ್ದು ವೆನ್‍ಲಾಕ್ ಆವರಣದಲ್ಲಿ ಹಗಲು ರಾತ್ರಿ ಜನ ಸಂಚಾರ ಇರುವುದರಿಂದ ಹಾಗೂ ಆಸ್ಪತ್ರೆಯಲ್ಲಿ ದಿನದ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು, ಎಲ್ಲಾ ಸಿಬ್ಬಂದಿಗಳಿಗೆ ಮತ್ತು ರೋಗಿಗಳ ಜೊತೆ ಬರುವವರಿಗೆ ಭದ್ರತಾ ಹಿತದೃಷ್ಟಿಯಿಂದ ವೆನ್‍ಲಾಕ್‍ಗೆ ಪ್ರತ್ಯೇಕ ಪೋಲಿಸ್ ಔಟ್ ಪೋಸ್ಟನ್ನು ನಡೆಸಲು ಸದಸ್ಯರು ಸಚಿವರ ಗಮನಕ್ಕೆ ತಂದ ತಕ್ಷಣ ಮಂಗಳೂರು ಪೋಲಿಸ್ ಆಯುಕ್ತರನ್ನು ಸಂಪರ್ಕಿಸಿ ಕ್ರಮವಹಿಸುವಂತೆ ಸೂಚಿಸಿದರು.

ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೆಡಿಸಿನ್ ಬಿಲ್ಲು ಬಾಕಿ ಇರುವ ಬಗ್ಗೆ ಸಚಿವರ ಗಮನ ಸೆಳೆದಾಗ ತಕ್ಷಣ ಬಿಡುಗಡೆಗೊಳಿಸಲು ಆಯುಕ್ತರಿಗೆ ಸೂಚಿಸಿದರು. ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಪದ್ಮನಾಭ ಅಮೀನ್, ಅಬ್ದುಲ್ ಕರೀಮ್ ಗೇರುಕಟ್ಟೆ, ಜೆ ಶಶಿಧರ್ ಬಜಾಲ್, ಅನಿಲ್ ಎಮ್ ರಸ್ಕಿನ್ಹಾ, ಜಯರಾಮ ದಿಡುಪೆ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ