ಮಂಗಳೂರು : ನಮ್ಮ ಕರಾವಳಿ ಜಿಲ್ಲೆಯು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ತುಳುಭಾಷೆ, ಸಂಸ್ಕೃತಿ, ಸಂಪ್ರದಾಯ, ಇತಿಹಾಸವನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಮತ್ತು ನಮ್ಮ ತುಳುವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು 1999ರಲ್ಲಿ ‘ನಮ್ಮಕುಡ್ಲ’ ವಾಹಿನಿ ಮಂಗಳೂರಿನಲ್ಲಿ ಉದಯವಾಯಿತು. ತುಳುನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಭಾಷಾ ವೈವಿಧ್ಯತೆಯೊಂದಿಗೆ ನಮ್ಮ ಕುಡ್ಲ ತುಳು ವಾರ್ತಾವಾಹಿಸಿ ಕಳೆದ 25 ವರ್ಷಗಳಿಂದ ಜಗದಗಲಕ್ಕೆ ತೆರೆದಿಟ್ಟಿದೆ. ಇಂತಹ ಅಪೂರ್ವವಾದ ಸಂಸ್ಕೃತಿಯನ್ನು ಭಾಷಾ ಧರ್ಮ ಸಾಮರಸ್ಯತೆಯ ಉದ್ದೇಶವನ್ನಿಟ್ಟುಕೊಂಡು 1999ರಲ್ಲಿ ನಮ್ಮ ಹಿರಿಯವರಾದ ಬಿ.ಪಿ.ಕರ್ಕೇರ ಮತ್ತು ಶ್ರೀಮತಿ ಲಕ್ಷ್ಮೀ ಕರ್ಕೇರವರ ಆಶಯದಂತೆ, ಮಕ್ಕಳಾದ ಕರ್ಕೇರಾ ಸಹೋದರರ ನೇತೃತ್ವದಲ್ಲಿ ನಮ್ಮ ಕುಡ್ಲ ತುಳು ವಾರ್ತಾವಾಹಿನಿ ಆರಂಭಗೊಂಡು ತುಳುನಾಡಿನ ಮೊತ್ತಮೊದಲ ತುಳು ವಾರ್ತೆ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,
ಕರಾವಳಿಯ ನಿತ್ಯದ ವಿದ್ಯಾಮಾನಗಳನ್ನು ತುಳು ವಾರ್ತೆಯ ಮೂಲಕ ನಿತ್ಯವೂ ಸಿಸಿಇಂಡಿಯಾ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು. ಅದರೊಂದಿಗೆ ವಾರದಿಂದ ವಾರಕ್ಕೆ ಐತಾರೊಡ್ಡ-ಐತಾರ, ಕರಿನ ಬರಿನ ಸುದ್ದಿಲು ಎಂಬ ವಿಶೇಷ ಸಂಚಿಕೆಯನ್ನು, ಸುಮಾರು 3 ಗಂಟೆಗಳ ಅವಧಿಯಲ್ಲಿ ಪ್ರಸಾರ ಮಾಡಲಾಯಿತು. ನಮ್ಮ ಪುಟ್ಟ ಪ್ರಯತ್ನಕ್ಕೆ ನಾಡಿನ ಜನ ಹಾರೈಸಿ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮರುವರ್ಷದಿಂದಲೇ ನಮ್ಮ ದೀಪಾವಳಿ ಗೂಡುದೀಪ ಸಂಸ್ಕೃತಿಯನ್ನು ಪುನರಪಿ ಜನಮಾನಸದಲ್ಲಿ ಅರುವಲ್ಲಿ ಗೂಡುದೀಪ ಸ್ಪರ್ಧೆಯನ್ನು ಪ್ರಾರಂಭಿಸಿ, ವರ್ಷಂಪ್ರತಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಸಿಕೊಂಡು ಬಂದಿದ್ದೇವೆ. ಗೂಡುದೀಪ ಸ್ಪರ್ಧೆಯೊಂದಿಗೆ ಸಾಧಕರಿಗೆ ನಮ್ಮಶುಡ್ಡ, ನಮ್ಮ ತುಳುವರ್, ಪ್ರತಿಭಾ ಪುರಸ್ಕಾರ, ಬಾಲ ಪ್ರತಿಭೆ ಪ್ರಶಸ್ತಿಗಳನ್ನು ಮತ್ತು ಸೇವಾ ಸಂಸ್ಥೆಗಳಿಗೆ ಬಿಪಿ ಕರ್ಕೇರಾ ಸೇವಾ ಪ್ರಶಸ್ತಿ, ಮಹಿಳಾ ಸಾಧಕರಿಗೆ ಲಕ್ಷ್ಮೀ ಕರ್ಕೇರಾ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ
ವಾರ್ತಾ ವಾಹಿನಿಯೊಂದಿಗೆ ಜಿಲ್ಲೆ, ರಾಜ್ಯ, ದೇಶ-ವಿದೇಶಗಳಿಂದಲೂ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುತ್ತಾ ಬಂದೆವು.. ವಿಶ್ವ ಬಂಟರ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ವಿಶ್ವ ತುಳುವೆರ ಪರ್ಣ, ಮಂಗಳೂರು ದಸರಾ, ಮಂಗಳೂರು ಶಾರದೋತ್ಸವ, ಮಂಗಳಾದೇವಿ ನವರಾತ್ರಿ ರಥೋತ್ಸವ, ಬಾಯಿಬಲಿ ಮಹಾಮಸ್ತಕಾಭಿಷೇಕ, ಧರ್ಮಸ್ಥಳದ ಮಹಾನಡಾವಳಿ, ಆಳ್ವಾಸ್ ವಿಶ್ವ ವಿರಾಸತ್ ನುಡಿಸಿರಿ ಇವೆಲ್ಲವನ್ನೂ ನೇರಪ್ರಸಾರ ಮಾಡಿ ನಮ್ಮ ಕುಡ್ಲ ವಿಶ್ವತುಳುವರ ಅಭಿನಂದನೆಗೆ ಪಾತ್ರವಾಗಿರುವುದರಲ್ಲಿ ಸಂಶಯವಿಲ್ಲ. ಕೊರೊನಾ ಸಂದರ್ಭದಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಕುಡ್ಲ ಸ್ಟುಡಿಯೋದಲ್ಲಿಯೇ ಚೌತಿ, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲವು ದಿನಗಳ ಕಾಲ ಚಿತ್ರೀಕರಣ ನಡೆಸಿ, ಸುಮಾರು ಸಾವಿರಕ್ಕೂ ಮಿಕ್ಕಿ ಕಲಾವಿದರನ್ನು ಸೇರಿಸಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಕರಿಗೆ ಉಣಬಡಿಸಿದ ಸಂತೃಪ್ತಿ ನಮಗಿದೆ ಎಂದರು.
ನಮ್ಮ ಸಾಧನೆಯ ಒಂದು ಮೈಲುಗಲ್ಲು. ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದ ‘ನಮ್ಮ ಕುಡ್ಲ Live’ ‘ಚಾನೆಲ್ ಗೆ ‘ನಮ್ಮಕುಡ್ಡ 24*7’ ಎಂಬ 24 ಗಂಟೆಗಳ ನಿರಂತರ ಸುದ್ದಿ ಚಾನೆಲ್ ಪ್ರಾರಂಭಿಸಲಾಯಿತು. ಮೂಲಕ ರಾಷ್ಟ್ರೀಯ ವಾಹಿನಿಗೆ ನಿರಂತರ ಕನ್ನಡ ಹಾಗೂ ತುಳು ವಾರ್ತೆಗಳು, ರಾಜಕೀಯ ವಿಶ್ಲೇಷಣೆ, ಲೈವ್ ಡಿಬೇಟ್. ನಮ್ಮ ಆರೋಗ್ಯ, ತುಳು ತುಲಿಪು, ಸಿನಿರುಡ್ಡ, ಕೃಷಿ ಖುಷಿ, ವೋಶಲ್ ಫಾರ್ ಲೋಕಲ್, ಬ್ಯುಸಿನೆಸ್ ಲೈನ್, ಜನಮನ, ಬದುಕಿನ ಹೊಂಗಿರಣ, ಬ್ಯುಸಿನೆಸ್ ಟಾನಿಕ್, ನೇರಮಾತು, ಧರ್ಮನಂಬಿಕೆ, ಭೂತಾರಾಧನೆ, ಸುಸಮಯ, ರಂಗವಿಹಾರ, ವಿದೂಷಕ, ಕಿರಿಕ್ ಕಿಡ್ಸ್ ರಿಯಾಲಿಟಿ ಶೋ, ಮೈ ಆಟೋಗ್ರಾಫ್, ಡಾನ್ಸ್ ಶುಡ್ಲ ಡಾನ್ಸ್ ನಮ್ಮಕುಡ್ಲ ಹೀರೋಸ್, ನೃತ್ಯಭಟನೆ ಸ್ಪರ್ಧೆ, ಕಾಪಿಕಾಡ್ರೆನ ಕಾಮಿಡಿ ಬಿತ್ತಿಲ್ ಬೋಳಾರ್”, “ಯಕ್ಷತಲಿಕೆ “ಇತ್ಯಾದಿ ಕಾರ್ಯಕ್ರಮಗಳ ಸರಿಸಾಟಿಯೆಂಬಂತೆ ಕಾರ್ಯಕ್ರಮ ನೀಡುತ್ತಿದೆಯೆಂದರೆ ಅತಿಶಯೋಕ್ತಿಯಾಗಲಾರದು ಎಂದರು.
ನಮ್ಮ 25 ವರ್ಷಗಳ ಸಾರ್ಥಕ ಪಯಣದ ಹೆಜ್ಜೆಗೆ ಬಲ ತುಂಬಿದವರು ವೀಕ್ಷಕ ಅಭಿಮಾನಿಗಳು. ನಿಮ್ಮೆಲ್ಲರ ಪ್ರೋತ್ಸಾಹ ವೀಕ್ಷಕರ ಮೆಚ್ಚುಗೆಯ ನುಡಿ, ಪ್ರಾಯೋಜಕರು ಮತ್ತು ಜಾಹೀರಾತುದಾರರ ಕೃಪೆ ಖಂಡಿತಾ ಶ್ರೀ ರಕ್ಷೆ.. ಕೇಬಲ್ ಆಪರೇಟರ್‌ಗಳ ನಿಷ್ಪಕ್ಷಪಾತ ಸೇವೆ ಅನನ್ಯ..ನಮ್ಮೆಲ್ಲಾ ಪ್ರಾಯೋಜಕರು, ವೀಕ್ಷಕರು,ಅಭಿಮಾನಿಗಳು, ನೌಕರ ವೃಂದದವರು ಮತ್ತು ಅವರ ಮನೆಯವರನ್ನೆಲ್ಲಾ ಒಟ್ಟುಗೂಡಿಸಿ ಆನಂದಿಸುವ ಸಮಾರಂಭವೇ ನಾವು ಆಯೋಜಿಸಿರುವ “ನಮ್ಮಕುಡ್ಲ ಬೊಳ್ಳಿ ಪರ್ಬ 2025″ ಆಗಸ್ಟ್ 12, ಮಂಗಳವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇಡೀ ದಿನ ಈ ಸಮಾರಂಭವು ಜರುಗಲಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 8ರಿಂದ ತುಳುನಾಡ ಗಾನಗಂಧರ್ವ ಜಗದೀಶ್ ಪುತ್ತೂರು ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭಗೊಂಡು, 9 ಗಂಟೆಗೆ ಶರವು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ಷೇಸರರು ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿರುವರು. ಶ್ರೀಧಾಮ ಮಾಣಿಲ, ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಯವರು, ಕಟೀಲು ಕ್ಷೇತ್ರದ ಆಸ್ರಣ್ಣರವರು ಆಶೀರ್ವದಿಸಲಿರುವರು. ವಿವಿಧ ವಲಯದ ಗಣ್ಯರು ಉಪಸ್ಥಿತಲಿರುವರು. ಮಧ್ಯಾಹ್ನ 12ರಿಂದ ನಡೆಯುವ ಬೊಳ್ಳೆ ತಮ್ಮನ ಸಮಾರಂಭದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡಲಿರುವರು. ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿರುವರು. ಕೇಂದ್ರದ ಮಾಜಿ ಸಚಿವರು ಜನಾರ್ಧನ ಪೂಜಾರಿ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಭಷಪರು ಡಾ.ಪೀಟರ್ ಪೌಲ್ ಸಲ್ದಾನ್ಹಾ ಉಪಸ್ಥಿತಲಿರುವರು. ತುಳು ಕನ್ನಡ ಸಿನೆಮಾ ನಟರು ತಾರಾಮೆರುಗು ನೀಡುವರು. ರಾತ್ರಿ 7ರಿಂದ ನಮ್ಮಕಂಬಳ ಪ್ರಶಸ್ತಿ ಪ್ರದಾನ 2024-25 ನಡೆಯಲಿರುವುದು. ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ “ನಮ್ಮಕುಡ್ಲ ಬೊಳ್ಳಿ ಪರ್ಬ 2025″ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಸುರೇಶ್ ಬಿ ಕರ್ಕೇರ, ಮೋಹನ್ ಬಿ ಕರ್ಕೇರ, ಸಂತೋಷ್ ಬಿ ಕರ್ಕೇರ, ಕದ್ರಿ ನವನೀತ ಶೆಟ್ಟಿ, ಶ್ರೀಕಾಂತ್ ರಾವ್, ಸುದರ್ಶನ್ ಕೊಟ್ಯಾನ್ ರವರು ಉಪಸ್ಥಿತರಿದ್ದರು.