ಉಡುಪಿ: ಸವಾಲುಗಳನ್ನು ಮೆಟ್ಟಿ ನಿಂತು, ಯುವಜನತೆಗಾಗಿ ಭಾರತ ಸಮೃದ್ಧವಾಗಬೇಕು. ಈ ನಿಟ್ಟಿನಲ್ಲಿ ಒಂದಾಗಬೇಕಾದ ಭಾರತೀಯರಿಗೆ ದೇಶ ಸೇವೆಯೇ ದೇವರ ಸೇವೆಯಾಗಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠದ ವತಿಯಿಂದ ಶ್ರೀಕೃಷ್ಣಮಠದ ಯಾಳಿ(ಸುತ್ತು ಪೌಳಿ) ಹಾಗೂ ಗೀತಾ ಮಂದಿರದಲ್ಲಿ ಶ್ರೀಪುತ್ತಿಗೆ ವಿಶ್ವ ವಿದ್ಯಾಪೀಠದ ಉದ್ಘಾಟನೆ ಬಳಿಕ ರಾಜಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಭಾರತ ಲಕ್ಷ್ಮೀ ಬಿರುದು ಸ್ವೀಕರಿಸಿ ಮಾತನಾಡಿದರು. ಭಾರತ ಮಾತೆಯನ್ನು ಹೃದಯಲ್ಲಿಟ್ಟು ಪೂಜಿಸುವ ಮನಸ್ಥಿತಿ ನಮ್ಮದಾಗಬೇಕು. ಶ್ರೀಕೃಷ್ಣ, ಗುರುಗಳು ಹಾಗೂ ಭಾರತ ಮಾತೆಯ ಅನುಗ್ರಹ ದೇಶ ಹಾಗೂ ಸ್ವಾರ್ಥವಿಲ್ಲದ ಪ್ರಧಾನಿಗಿರಲಿ. ಜಗತ್ತಿಗೆ ಶ್ರೀಕೃಷ್ಣನ ಸಂದೇಶ ಪ್ರಸಾರ, ಕೋಟಿ ಗೀತಾ ಲೇಖನ ಯಜ್ಞದಂತಹ ಶ್ಲಾಘನೀಯ ಕಾರ್ಯ ಪುತ್ತಿಗೆ ಶ್ರೀಗಳಿಂದಾಗುತ್ತಿದೆ ಎಂದರು.
ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮಾತನಾಡಿ, ವಿದೇಶದಲ್ಲಿ ಮನೆ ಕಟ್ಟಬಹುದು. ಆದರೆ, ಮಠ ಕಟ್ಟೋದು ಸುಲಭವಲ್ಲ. ಭಾರತೀಯ ಸಂಸ್ಕೃತಿ, ಧರ್ಮದ ಕಂಪನ್ನು ವಿದೇಶದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಹರಡಿದ್ದಾರೆ ಎಂದು ಹೇಳಿದರು. ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಭಾರತ ಎದುರಿಸುತ್ತಿರುವ ಸಂಕಷ್ಟಗಳು ಪರಿಹಾರವಾಗಲು, ಜಗತ್ತಿನಲ್ಲೇ ಸಮಗ್ರ ಅಭಿವೃದ್ಧಿಯಲ್ಲಿ ನಂಬರ್ ಒನ್ ಆಗಲು, ಭಾರತದ ಲಕ್ಷ್ಮೀ ನಿರ್ಮಲಾ ಸೀತಾರಾಮನ್ ಅವರನ್ನು ಶ್ರೀಕೃಷ್ಣ ವಿಶೇಷವಾಗಿ ಅನುಗ್ರಹಿಸಲಿ ಎಂದು ಹಾರೈಸಿದರು. ಯತಿಗಳಿಗೆ ಮನಸಾ ನಮಸ್ಕರಿಸಿ ಮಾತು ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಬದುಕಿನಲ್ಲಿ ಉಡುಪಿ ಕೃಷ್ಣನಿಗೆ ಹತ್ತಿರವಾಗುವೆ. ದರ್ಶನ ಭಾಗ್ಯ ಪಡೆವೆನೆಂದು ಎಣಿಸಿರಲೇ ಇಲ್ಲವೆಂದು ಭಾವಪರವಶರಾದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆಳೆತ್ತರದ ಕಡಗೋಲು ಪ್ರದಾನ ಮಾಡಲಾಯಿತು. ಬಿರುದುಪತ್ರವನ್ನು ಷಣ್ಮುಖ ಆಚಾರ್ಯ ವಾಚಿಸಿದರು.