ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸವನ್ನು ಬೆರೆಸಿ ಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ.ಪ್ರಶಾಂತ್ ಪೈಯವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಹೊಸ ಗುತ್ತಿಗೆದಾರರೊಬ್ಬರು ಉದ್ಯಾನವನದ ಪ್ರಾಣಿಗಳಿಗೆ ಮಾಂಸ ಪೂರೈಕೆಯ ಗುತ್ತಿಗೆ ಪಡೆದಿದ್ದಾರೆ. ಮಾಂಸಕ್ಕೆ ಕೊಳೆತ ಅಥವಾ ವಿಷಪೂರಿತ ಮಾಂಸ ಬೆರೆಸಿ ಹೊಸ ಟೆಂಡರುದಾರರ ಮಾಂಸವನ್ನು ತಿರಸ್ಕರಿಸುವಂತೆ ಮಾಡುವ ಹುನ್ನಾರವನ್ನು ಹಿಂದಿನ ಟೆಂಡರುದಾರ ಮಾಡಿದ್ದಾನೆಂದು ಆತನ ನೌಕರನೊಬ್ಬ ಆ.7ರಂದು ಉದ್ಯಾನವನದ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಮೂಲಕ ಪ್ರಾಣಿಗಳನ್ನು ಕೊಲ್ಲಲು ಹುನ್ನಾರ ನಡೆಸಿರುವುದು ತಿಳಿದುಬಂದಿದೆ. ಈ ಬಗ್ಗೆ ಪರಿಶೀಲಿಸಿ, ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿದ್ದಾರೆ ಎಂದು ವರದಿಯಾಗಿದೆ.