ಬೆಳ್ತಂಗಡಿ : ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಅನುಮತಿ ಪಡೆದು ನದಿ ಪರಂಬೋಕು ಸೇರಿದಂತೆ ಸರಕಾರಿ ಜಾಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಬೋಬನ್ ಎಂಬವರ ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದು ನದಿಯ ಪರಂಬೋಕು ಜಾಗದಲ್ಲಿ ಮುಂಡಾಜೆ ನಿವಾಸಿ ಜಾನ್ ಎಂಬವರ ಮಗ ಪವನ್ ಎಂಬಾತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.18 ಕ್ಕೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಸುಧಾ ನೇತೃತ್ವದಲ್ಲಿ ಬೆಳ್ತಂಗಡಿ ಕಂದಾಯ ಇಲಾಖೆ ಮತ್ತು ಭೂಮಾಪನ ಹಾಗೂ ಧರ್ಮಸ್ಥಳ ಪೊಲೀಸರ ಸಹಕಾರದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಕಲ್ಲು ಗಣಿಗಾರಿಕೆಗೆ ಉಪಯೋಗಿಸುತ್ತಿದ್ದ ಎರಡು ಹಿಟಾಚಿ, ಒಂದು ಟಿಪ್ಪರ್, ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.