ಮಂಗಳೂರು: ಅನ್ನಭಾಗ್ಯ ಯೋಜನೆಯಡಿ ದೊರಕುವ ಅಕ್ಕಿಯನ್ನು ಮಾರಾಟ ಮಾಡುವ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಾನುಭವಿಗಳೇ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯ ಮೂಟೆಗಳನ್ನು ಸ್ವಚ್ಛ ಸ್ಥಳಗಳಲ್ಲಿ ಇರಿಸಬೇಕು. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಅವರು ತಿಳಿಸಿದರು. ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿಯೋಜನೆ, ಯುವನಿಧಿ, ಗೃಹಲಕ್ಷ್ಮಿ ಯೋಜನೆಗಳಿಂದ ಬಡವರು ವಂಚಿತರಾಗಬಾರದು. ಪ್ರತಿಯೊಬ್ಬರೂ ಈ ಯೋಜನೆಯ ಅನುಕೂಲವನ್ನು ಪಡೆಯಬೇಕು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕುವಾರು ನೋಂದಣಿ ಹಾಗೂ ಮಂಜೂರಾದ ಸಹಾಯಧನ ಪಡೆದುಕೊಂಡ ಫಲಾನುಭವಿಗಳ ಪಟ್ಟಿ ಹಾಗೂ ಮೊತ್ತದ ವಿವರವನ್ನು ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ ಸಭೆಯಲ್ಲಿ ನೀಡಬೇಕು ಎಂದು ಸೂಚಿಸಿದರು.