ಪುತ್ತೂರು: ರಾಜ್ಯದಲ್ಲಿ ಈ ಬಾರಿ ಮಳೆಯ ಕಾರಣದಿಂದ ಅಡಿಕೆ ಬೆಳೆಗಾರರು ಕೊಳೆರೋಗದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕಳೆದ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ವರ್ಷವೂ ಅಂತ್ಯವಾಗಿದ್ದು, ತತ್‌ಕ್ಷಣವೇ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಆಗ್ರಹಿಸಿದೆ. ಈ ವರ್ಷ ಮಳೆಯ ಕಾರಣದಿಂದ ಅಡಿಕೆಗೆ ವ್ಯಾಪಕವಾಗಿ ಕೊಳೆರೋಗ ಬಾಧಿಸಿದೆ. ಅಡಿಕೆ ಬೆಳೆಗಾರರ ಸಂಘವು ನಡೆಸಿದ ಸರ್ವೆಯ ಪ್ರಕಾರ ಈ ಬಾರಿ ಕೃಷಿಕರಿಗೆ ಶೇ. 50ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆ ನಷ್ಟವಾಗಿದೆ. ಬೆಳೆಗಾರರು ಈಗ ಸಂಕಷ್ಟದಲ್ಲಿದ್ದಾರೆ. ಶೇ. 95ರಷ್ಟು ಅಡಿಕೆ ಬೆಳೆಗಾರರು ಈ ಬಾರಿ ಕೊಳೆರೋಗದ ಸಂಕಷ್ಟ ಎದುರಿಸುತ್ತಿದ್ದಾರೆ. ಶೇ. 85ರಷ್ಟು ಕೃಷಿಕರಿಗೆ ಮಳೆಯ ಕಾರಣದಿಂದ ಕೊಳೆರೋಗ ತಡೆಗೆ ಬೋರ್ಡೊ ಸಿಂಪಡಣೆಗೆ ಸಾಧ್ಯವಾಗಿಲ್ಲ. ಈಗ ಕೊಳೆರೋಗ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಕೊಳೆರೋಗ ನಿಯಂತ್ರಣಕ್ಕೆ ಮೂರನೇ ಸುತ್ತಿನ ಔಷಧ ಸಿಂಪಡಣೆಗೂ ಪ್ರಯತ್ನ ನಡೆಯುತ್ತಿದೆ. ಕಳೆದ ವರ್ಷವೂ ಹಲವು ಕಡೆ ಇಳುವರಿಯ ಕೊರತೆಯೂ ಇತ್ತು. ಈ ಹಂತದಲ್ಲಿ ಬೆಳೆಗಾರರಿಗೆ ಆರ್ಥಿಕ ನೆರವು ಕೂಡ ಅಗತ್ಯ ಇದೆ. ಹೀಗಾಗಿ, ಕಳೆದ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಕಟ್ಟಿರುವ ಬೆಳೆಗಾರರಿಗೆ ತತ್‌ಕ್ಷಣವೇ ಬೆಳೆ ವಿಮೆ ಪಾವತಿಗೆ ವ್ಯವಸ್ಥೆ ಮಾಡುವುದರ ಜತೆಗೆ ಬೆಳೆ ವಿಮೆ ಪಾವತಿಗೆ ಸಾಧ್ಯವಾಗದ ಅಡಿಕೆ ಬೆಳೆಗಾರರಿಗೆ ನಷ್ಟದ ಪರಿಹಾರ ಕ್ರಮವಾಗಿ ತತ್‌ಕ್ಷಣವೇ ಸರಕಾರವು ಇಲಾಖೆಗಳ ಮೂಲಕ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ. ಹವಾಮಾನ ಆಧಾರಿತ ಬೆಳೆವಿಮೆಯ ಕಳೆದ ಸಾಲಿನ ವಿಮಾ ವರ್ಷವು ಅಂತ್ಯವಾಗಿದೆ. ಈಗ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ದಾಖಲೆಗಳನ್ನು ಪರಿಶೀಲಿಸಿ ವಿಮೆ ಬಿಡುಗಡೆಗೆ ತತ್‌ಕ್ಷಣದ ಕ್ರಮ ಆಗಬೇಕಾಗಿದೆ. ಈ ಹಂತಗಳನ್ನು ತತ್‌ಕ್ಷಣವೇ ಮಾಡಬೇಕಾಗಿದೆ. ಕಳೆದ ಒಂದೆರಡು ವರ್ಷಗಳಿಂದ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ತಿಂಗಳಲ್ಲಿ ವಿಮೆ ಹಣ ಬಿಡುಗಡೆಯಾಗುತ್ತಿತ್ತು. ಇಲಾಖೆಗಳ ಬಳಿ ಹವಾಮಾನದ ಡಾಟಾಗಳು ಇರುವುದರಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಳೆಗಾರರ ಸಂಘವು ಆಗ್ರಹಿಸಿದೆ.