image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳೆಯರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಬಗ್ಗೆ ಸಹಕಾರ- ಜಿ.ಪಂ ಸಿ.ಇ.ಓ

ಮಹಿಳೆಯರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಬಗ್ಗೆ ಸಹಕಾರ- ಜಿ.ಪಂ ಸಿ.ಇ.ಓ

ಮಂಗಳೂರು : ಸಂಜೀವಿನಿ ವಿವಿಧ ಸ್ವಸಹಾಯ ಸಂಘದ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟವು ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸಲು ಸಹಕರಿಸುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಅವರ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಹೇಳಿದರು. ಅವರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಮಂಗಳೂರು ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ಸೋಮವಾರ ನಡೆದ ಗಣೇಶ ಹಬ್ಬದ ವಿಶೇಷ ಸಂಜೀವಿನಿ ಮಾಸಿಕ ಸಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ಎನ್.ಆರ್.ಎಲ್.ಎಮ್ ಸಂಜೀವಿನಿ ಒಕ್ಕೂಟದ ಸ್ತ್ರೀಯರು ಆಗಮಿಸಿದ್ದು, ಇನ್ನು ಮುಂದೆಯೂ ಒಕ್ಕೂಟದ ಮಹಿಳೆಯರಿಗೆ ಅವರವರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬ್ರ್ಯಾಂಡಿಂಗ್, ಲೇಬಲ್ ಮುಂತಾದರ ಬಗ್ಗೆ ತರಬೇತಿ ಸೇರಿದಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಈ ರೀತಿಯ ಮಾರಾಟ ಮೇಳಗಳನ್ನು ಆಯೋಜಿಸುವುದರಿಂದ ಮಹಿಳೆಯರು ತಾವು ಕರಗತ ಮಾಡಿಕೊಂಡ ಕೌಶಲ್ಯದಿಂದ ಉತ್ಪಾದಿಸಿದ ಉತ್ಪನ್ನಗಳಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ಅವರು ಹೇಳಿದರು. ಮಾರಾಟ ಮಳಿಗೆಗಳಲ್ಲಿ ಉತ್ತಮ ಗುಣಮಟ್ಟದ ಆಯುರ್ವೇದಿಕ್ ಉತ್ಪನ್ನಗಳು, ಗೃಹ ಬಳಕೆ ವಸ್ತುಗಳು, ಕೃತಕ ಆಭರಣ, ಉಡುಪುಗಳು, ಅಲಂಕಾರ ವಸ್ತುಗಳು, ಮಹಿಳೆಯರು ಸ್ವತಃ ತಯಾರಿಸಿದ ಉಪ್ಪಿನಕಾಯಿ, ಹಪ್ಪಳ ಮುಂತಾದ ಆಹಾರ ಪದಾರ್ಥಗಳು, ಕರಕುಶಲ ಉತ್ಪನ್ನಗಳು ನೋಡುಗರ ಕಣ್ಸೆಳೆಯಿತು. ಈ ಸಂದರ್ಭದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಜಯರಾಂ, ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ್ ವಂದಿಸಿದರು.

Category
ಕರಾವಳಿ ತರಂಗಿಣಿ