ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದ ರನ್ ವೇ ವಿಸ್ತರಣೆ ಅಗತ್ಯವಾಗಿದೆ. ಶೀಘ್ರದಲ್ಲೇ 45 ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಒದಗಿಸಲು ವಿಮಾನಯಾನ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇನೆ. ಪ್ರಯಾಣಿಕರ ಬೇಡಿಕೆ ಹೆಚ್ಚಿದ್ದರೆ ಹೊಸ ತಾಣಗಳಿಗೆ ವಿಮಾನ ಯಾನ ಸಾಧ್ಯ. ಆದರೆ ವೈಡ್ ಬಾಡಿ ಏರ್ ಕ್ರಾಫ್ಟ್ ಚಾಲನೆಗೆ ಇನ್ನಷ್ಟು ಕಾಲ ಬೇಕು ಎಂದರು. ಹೊರಗಿನಿಂದ ಇಲ್ಲಿಗೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದಕ್ಕಿಂತ ಮಂಗಳೂರು ಮೂಲದವರೇ ಇಲ್ಲಿಗೆ ಮರಳಿ ಅಭಿವೃದ್ಧಿ ಕೈಗೊಳ್ಳುವುದು ಸುಲಭ. ಇದಕ್ಕಾಗಿ 'ಬೊಲ್ಪು ' ಹಾಗೂ 'ಬ್ಯಾಕ್ ಟು ಊರು' ಎನ್ನುವ ಪರಿಕಲ್ಪನೆಯಡಿ ಯೋಜನೆ ರೂಪಿಸಲಾಗಿದೆ ಎಂದರು. ಮಂಗಳೂರು ಎನ್ನುವುದು ಸಾಧ್ಯತೆಗಳ ಸಾಗರ. ಮಂಗಳೂರಿಗೆ ಹೊರಗಿನಿಂದ ಹೊಸ ಹೂಡಿಕೆಗಳನ್ನು ಆಹ್ವಾನಿಸುವುದು ಕಷ್ಟ, ಮಂಗಳೂರಿನವರೇ ಇಲ್ಲಿಗೆ ಮರಳಿ ಅಭಿವೃದ್ಧಿಗೆ ಕೊಡುಗೆ ನೀಡುವುದು ಸುಲಭ. ಇದಕ್ಕಾಗಿಯೇ ಬೊಲ್ಪು ಹಾಗೂ ಬ್ಯಾಕ್ ಟು ಊರು ಎನ್ನುವ ಯೋಜನೆ ರೂಪಿಸಲಾಗಿದೆ ಎಂದು ಸಂಸದರು ಹೇಳಿದರು. ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ವಿಭಾಗದ ಅಧೀನವಿರುವುದು ನಿರ್ವಹಣೆಗೆ ಅಡ್ಡಿಯಾಗಿದೆ, ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಚಿವ ನಿತಿನ್ ಗಡ್ಕರಿ ಜತೆಗೆ ಮಾತುಕತೆ ನಡೆಸಿದ್ದು, ಅದು ಫಲಪ್ರದವಾಗುವ ನಿರೀಕ್ಷೆ ಇದೆ ಎಂದು ಸಂಸದ ಚೌಟ ಹೇಳಿದರು.