image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿಂದೂ ಒಬ್ಬ ಬೇರೆ ಧರ್ಮದ ವಿಡಿಯೋ ಮಾಡಿದ್ರೆ ಪರಿಸ್ಥಿತಿ ಏನಾಗಬಹುದಾಗಿತ್ತು - ಸತೀಶ್ ಕುಂಪಲ

ಹಿಂದೂ ಒಬ್ಬ ಬೇರೆ ಧರ್ಮದ ವಿಡಿಯೋ ಮಾಡಿದ್ರೆ ಪರಿಸ್ಥಿತಿ ಏನಾಗಬಹುದಾಗಿತ್ತು - ಸತೀಶ್ ಕುಂಪಲ

ಮಂಗಳೂರು : ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ಪ್ರಕ್ರಿಯೆ ಶುರುವಾಗಿದ್ದು ಸಮೀರ್‌ ಎಂ.ಡಿ. ಮಾಡಿದ ವಿಡಿಯೊದಿಂದ. ಸರ್ಕಾರ ಆತನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು. ಆತನನ್ನು ಇದುವರೆಗೂ ಏಕೆ ಬಂಧಿಸಿಲ್ಲ ಏಕೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ  ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಇತರ ದೌರ್ಜನ್ಯಗಳ ಆರೋಪಗಳ ಬಗ್ಗೆ ಎಸ್‌ಐಟಿ ಸೇರಿದಂತೆ ಯಾವುದೇ ತನಿಖೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳದ ಬಗ್ಗೆ ವೀಡಿಯೋ ಮಾಡಿ ಕ್ಷೇತ್ರದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ಷಡ್ಯಂತ್ರ ನಡೆಸಲಾಗಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ಹರಿವಿನ ಬಗ್ಗೆ ಶಂಕೆ ಇದೆ. ಆದ್ದರಿಂದ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ಪ್ರಸಕ್ತ ನಡೆಯುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಹಿಂದೂ ಧರ್ಮ ಕ್ಷೇತ್ರದ ಬಗ್ಗೆ ಆರೋಪಿಸಿ ಎಐ ಮೂಲಕ ಸಮೀರ್ ಎಂ.ಡಿ. ಮಾಡಿರುವ ವೀಡಿಯೋದಿಂದ ಪ್ರಕರಣ ಅಂತಾರಾಷ್ಟ್ರೀಯವಾಗಿ ಪ್ರಸಾರವಾಗಿದೆ. ಇದಕ್ಕೆ ಸಾಕಷ್ಟು ಹಣ ಪೂರೈಕೆಯಾಗಿರುವ ಅನುಮಾನವಿದ್ದು, ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ವೀಡಿಯೋ ಮೂಲಕ ಅನ್ಯ ಧರ್ಮದ ವ್ಯಕ್ತಿ ಇಷ್ಟೊಂದು ಆರೋಪ ಮಾಡಿದರೂ ಹಿಂದೂ ಧರ್ಮ ಸಹನೆಯಿಂದ ಇದೆ. ಅದೇ ಇನ್ನೊಂದು ಧರ್ಮದ ಬಗ್ಗೆ ಈ ರೀತಿ ಆಗಿದ್ದರೆ ಕತೆ ಏನಾಗುತಿತ್ತು ಎಂದು ಪ್ರಶ್ನಿಸಿದ ಸತೀಶ್ ಕುಂಪಲ, ಸಮೀರ್ ಎಂ.ಡಿ.ಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಧರ್ಮಸ್ಥಳದ ಪ್ರಕರಣದಲ್ಲಿ ಒಂದೆಡೆ ಸಮೀರ್ ಹಾಗೂ ಇನ್ನೊಂದೆಡೆ ಸೈಮನ್ ಎಂಬ ಅನ್ಯ ಧರ್ಮೀಯರ ಪಾತ್ರವೇನು? ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಯಾಕೆ ಮಾಡಿದ್ದಾರೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಭರತ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ