ಮಂಗಳೂರು : ಸೆ.22 ರಿಂದ ಅ.2 ರ ವರೆಗೆ ಕುದ್ರೋಳಿ ಕ್ಷೇತ್ರದಲ್ಲಿ ಅದ್ಧೂರಿ ಮಂಗಳೂರು ದಸರಾ ನಡೆಯಲಿದೆ. ಕುದ್ರೋಳಿ ಕ್ಷೇತ್ರದ ದಸರಾ ಕೇವಲ ಹಬ್ಬವಲ್ಲ, ಅದು ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಸಮಾಗಮ. ಆರ್ಥಿಕ ಪುನಸ್ಟೇತನಕ್ಕೆ ದಾರಿ,ಇಲ್ಲಿ ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಪ್ರತಿಯೊಬ್ಬ ಭಕ್ತನು ತಾಯಿ ಶಾರದೆಯ ಆಶೀರ್ವಾದ ಪಡೆಯುವ ಸೌಭಾಗ್ಯ ಹೊಂದುತ್ತಾನೆ ಎಂಬುದು ನಂಬಿಕೆ. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಶ್ರೀ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಜೊತೆಗೂಡಿಕೊಂಡು 1991ರಿಂದ ದಸರಾ ಯಾವಾಗಲೂ ಸಾಮಾಜಿಕ ಬದಲಾವಣೆಯ ದಾರಿ ಆಗಿ ಬೆಳೆದಿದೆ. ಸಮಾಜಮುಖಿ ಕಾರ್ಯಕ್ರಮಗಳು, ಕಲೆಗೆ ನೀಡುತ್ತಿರುವ ಪ್ರೋತ್ಸಾಹ, ಧಾರ್ಮಿಕ ಆಚರಣೆಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಮಂಗಳೂರು ದಸರಾದ ವೈಶಿಷ್ಟವಾಗಿದ್ದು ಈ ವರ್ಷವು ಮಂಗಳೂರು ದಸರಾ ವಿಶೇಷವಾಗಿ, ವಿಭಿನ್ನವಾಗಿ ಮೂಡಿಬರಲಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರ ಪದ್ಮರಾಜ್ ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಗಣಪತಿ, ಆದಿಶಕ್ತಿ ಸಹಿತವಾಗಿ ಶಾರದ ಮಾತೆ, ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಎಲ್ಲಾ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು, ಗಣಹೋಮ, ಚಂಡಿಕಾ ಯಾಗ ಹೋಮಹವನ ಗಳು ನಡೆಯಲಿದ್ದು ಸಕಲ ಸಿದ್ದತೆಗಳನ್ನ ನಡೆಸಲಾಗಿದ್ದು ಮಂಗಳೂರಿನ ದಸರಾ ಎಂದರೆ ಕೇವಲ ಧಾರ್ಮಿಕ ಹಬ್ಬವಲ್ಲ, ಅದು ಕಲೆಯ ಮಹಾಮೇಳ, ಸಂಸ್ಕೃತಿಯ ಜಾತ್ರೆ ಎಂದರು. ತಾಯಿ ಶಾರದೆಯ ಆರಾಧನೆಯ ಜೊತೆಗೆ ಕಲಾ ಆರಾಧನೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿರುವ ಕ್ಷೇತ್ರ ಕುದ್ರೋಳಿ, ಈ ಬಾರಿ ದಸರಾವನ್ನು ಇನ್ನಷ್ಟು ವೈಭವಶಾಲಿಯಾಗಿಸಿದೆ.
ಈ ಬಾರಿ ಪ್ರತಿದಿನ ಮೂರು ತಂಡಗಳಿಗೆ ಕಲಾಪ್ರದರ್ಶನದ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಗುಣಮಟ್ಟವನ್ನು ಖಾಯ್ದುಕೊಳ್ಳುವ ನಿಟ್ಟಿನಲ್ಲಿ ಬಂದಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಅವರ ಪ್ರದರ್ಶನದ ವೀಡಿಯೋಗಳನ್ನು ಪರಿಶೀಲಿಸಿ ಆಯ್ಕೆಮಾಡಲಾಗಿದೆ ಹಾಗೂ ಕಳೆದ 3ವರ್ಷಗಳ ಅವಧಿಯೊಳಗಡೆ ಕಲಾಪ್ರದರ್ಶನ ನೀಡಿದವರನ್ನು ಹೊರತುಪಡಿಸಿ ಹೊಸ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.ಒಟ್ಟಾರೆ 31 ತಂಡಗಳು, 700-800 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದು ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಲಾವಿದರ ತಂಡಗಳು ಆಗಮಿಸುತ್ತಿದ್ದಾರೆ. ವಿಭಿನ್ನ ಕಲಾ ಪ್ರದರ್ಶನ ಈ ಬಾರಿ ಕಲೆ ಮತ್ತು ಸಂಸ್ಕೃತಿಯ ಎಲ್ಲ ರೂಪಗಳು ಒಂದೇ ವೇದಿಕೆಯಲ್ಲಿ ಮೂಡಿಬರಲಿದ್ದು ಭರತನಾಟ್ಯ, ವೀಣಾ ವಾದನ,ಜಾನಪದ ಕಲಾಪ್ರಕಾರಗಳು, ಹರಿಕಥೆ, ತಾಳಮದ್ದಳೆ,ಯಕ್ಷಗಾನ, ಯಕ್ಷಗಾನ ನಾಟ್ಯ ಪುಂಡು ವೇಶ ವೈಭವ, ನೃತ್ಯ ರೂಪಕ, ಜಾದು ಪ್ರದರ್ಶನ,ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್.ಡಿ.ಎಮ್ ಕಲಾ ವೈಭವ ನಡೆಯಲಿದೆ ಎಂದು ಮಾಹಿತಿ ನೀಡಿದರು. ದಸರಾ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ನಡೆಯುವ 21 ಕಿ.ಮೀ ಮ್ಯಾರಥಾನ್ ಕೂಡಾ ನಡೆಯಲಿದೆ. ದೇವಸ್ಥಾನದ ಆಸುಪಾಸಿನಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದ ಕಾರಣ ವಾಹನ ದಟ್ಟಣೆ ಉಂಟಾಗುವುದರಿಂದ ಉರ್ವ ಮೈದಾನ ಹಾಗೂ ಚರ್ಚ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಯಂತ್ ಎಚ್. ಸೋಮಸುಂದರ್,ಮಾಧವ ಸುವರ್ಣ, ದೇವೇಂದ್ರ ಪೂಜಾರಿ ಹಾಗೂ ಕತೀನ್ ಧೀರಾಜ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.