image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಪ್ಪೆಗಳ ನಾದ, ಸಂರಕ್ಷಣೆಯ ಪಾಠ: ಕಲಿಕಾ ಶಿಬಿರ ಯಶಸ್ವಿ

ಕಪ್ಪೆಗಳ ನಾದ, ಸಂರಕ್ಷಣೆಯ ಪಾಠ: ಕಲಿಕಾ ಶಿಬಿರ ಯಶಸ್ವಿ

ಶಿವಮೊಗ್ಗ: ಪಶ್ಚಿಮಘಟ್ಟದ ಭಾಗವಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆಯಲ್ಲಿ ಆಗಸ್ಟ್ 15-17ರವರೆಗೆ ಉಭಯ ಜೀವಿಗಳ ಬಗೆಗಿನ ವಸತಿ ಕಾರ್ಯಗಾರ, ವನ್ಯಜೀವಿ ಸಂಶೋಧಕ ಡಾ. ಅಮಿತ ಹೆಗಡೆಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. 

ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ಖಜಾನೆಯಾಗಿದ್ದು, ಇದರಲ್ಲಿ ಉಭಯ ಜೀವಿಗಳು ವಿಶೇಷವಾಗಿ ಕಪ್ಪೆಗಳ ಅಧ್ಯಯನ, ದಾಖಲಾತಿ, ಅವುಗಳ ಸ್ವಭಾವ, ಸಂತಾನೋತ್ಪತ್ತಿ, ಹವಮಾನ ವೈಪರಿತ್ಯ ಹಾಗೂ ಸುತ್ತಮುತ್ತಲ ಸೂಕ್ಷ್ಮ ಬದಲಾವಣೆಗಳಿಂದ ಜೀವ ವೈವಿಧ್ಯತೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾರ್ಗದರ್ಶನವನ್ನು ನೀಡಲಾಯಿತು.

ಕಾರ್ಯಾಗಾರವು ಕೇವಲ ಶಿಕ್ಷಣಕ್ಕಷ್ಟೇ ಸೀಮಿತಗೊಳ್ಳದೆ ಸಂರಕ್ಷಣೆ ಹಾಗೂ ಪ್ರಕೃತಿಯೊಂದಿಗೆ ಗಾಢಬಾಂಧವ್ಯವನ್ನು ಬೆಳೆಸುವ ಬಗ್ಗೆ ಗಮನಹರಿಸಲಾಯಿತು. 

ವಿವಿಧ ರಾಜ್ಯ ಹಾಗೂ ವಿವಿಧ ಭಾಗಗಳಿಂದ, ವಿದ್ಯಾರ್ಥಿಗಳು, ಶಿಕ್ಷಕರಿಂದ ಹಿಡಿದು, ಕೃಷಿ ಸಂಶೋಧಕರು, ಚಾರಣಪ್ರಿಯರು, ಪರಿಸರಾಸಕ್ತರು ಭಾಗವಹಿಸಿ ಈ ಅಮೂಲ್ಯ ಅನುಭವದ ಜೊತೆಗೆ ಸಂರಕ್ಷಣೆಯ ಹೊಸ ಪ್ರೇರಣೆ ಪಡೆದುಕೊಂಡರು. 

ಮಳೆಗಾಲವನ್ನು ನಾವು ಒಂದು ಋತುವಿನ ರೀತಿ ನೋಡಿರುತ್ತೇವೆ ಇದರ ಒಳಗಿನ ಸೂಕ್ಷ್ಮ ಬದಲಾವಣೆಗಳು ನಮಗೆ ಗೋಚರಿಸುವುದಿಲ್ಲ. ಮುಂಗಾರು, ಹಿಂಗಾರು ಮಳೆ, ಕೃಷಿಗೆ ಎಷ್ಟು ಪೂರಕವೋ ಹಾಗೆ ಕಪ್ಪೆಗಳ ಜೀವನ ಚಕ್ರಕ್ಕೂ ಅಷ್ಟೇ ಪೂರಕ, ಉದಾಹರಣೆಗೆ ಮಳೆಯ ಪ್ರಾರಂಭದಲ್ಲಿ ಕೂಗುವ ಕಪ್ಪೆಗಳು ಮಧ್ಯಂತರದಲ್ಲಿ ಇರುವುದಿಲ್ಲ ಮಧ್ಯಂತರದಲ್ಲಿ ಕೂಗುವ ಕಪ್ಪೆಗಳು ಮಳೆಗಾಲದ ಕೊನೆಯಲ್ಲಿ ಇರುವುದಿಲ್ಲ.

ಮೊದಲು ಮಳೆಯಾಗಿ ನಂತರ ಎರಡು ಮೂರು ತಿಂಗಳು ಮಳೆಯೇ ಇಲ್ಲದಿರುವುದು ಅಥವಾ ಕೇವಲ ರಭಸದ ಮಳೆ ಸುರಿಯುವುದು ಇವೆಲ್ಲವೂ ಅವುಗಳ ಜೀವನ ಚಕ್ರದ ಅಸಮತೋಲನಕ್ಕೆ ಕಾರಣವಾಗುತ್ತದೆ. ಕಪ್ಪೆಗಳ ಕೂಗು ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಇವುಗಳ ಕೂಲಂಕುಶ ಅಧ್ಯಯನದಿಂದ ಪರಿಸರದ ಬದಲಾವಣೆ ಹವಾಮಾನ ವೈಪರಿತ್ಯಗಳ ಬಗ್ಗೆ ಕೂಡ ತಿಳಿಯಬಹುದು. 

“ತೀರಾ ಅಪರೂಪದ ಪ್ರಭೇದಗಳು ಎಷ್ಟೋ ಬಾರಿ ಕಾಡಿನಲ್ಲಿಯೇ ಕಂಡು ಬರಬೇಕೆಂದೇನಿಲ್ಲ ಕೆಲವೊಮ್ಮೆ ಕೃಷಿ ಭೂಮಿ ಹಾಗೂ ಮನೆಯ ಸುತ್ತಮುತ್ತಲೂ ಕೂಡ ಕಂಡು ಬರುವುದು. ಜನರಿಗೆ ಹಾಗೂ ಕೃಷಿಕರಿಗೆ ಇದರ ಬಗ್ಗೆ ಅರಿವು ಮೂಡಿ ಸುತ್ತ ಜೀವ ವೈವಿಧ್ಯತೆಯನ್ನು ಸಂರಕ್ಷಿಸಬೇಕಾಗಿದೆ, ಈ ಕಾರ್ಯವನ್ನು ಸದಾ ಮಾಡುತ್ತಿದ್ದೇವೆ” ಎಂದು ಡಾಕ್ಟರ್ ಅಮಿತ್ ಹೆಗಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ