image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾನೂನಿನ ನೆಪದಲ್ಲಿ ದ್ವನಿವರ್ಧಕ ಬಳಕೆ ನಿರ್ಬಂಧ : ಸೆಪ್ಟೆಂಬರ್ 09ರಂದು ಬೃಹತ್ ಜನಾಗ್ರಹ ಸಭೆ

ಕಾನೂನಿನ ನೆಪದಲ್ಲಿ ದ್ವನಿವರ್ಧಕ ಬಳಕೆ ನಿರ್ಬಂಧ : ಸೆಪ್ಟೆಂಬರ್ 09ರಂದು ಬೃಹತ್ ಜನಾಗ್ರಹ ಸಭೆ

ಮಂಗಳೂರು : ಮಳೆಗಾಲ ಮುಗಿಯುತ್ತಿದಂತೆ ಕರಾವಳಿಯಲ್ಲಿ ಅಲ್ಲಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಭಾಗವಾಗಿದ್ದು ಸಾವಿರಾರು ವರ್ಷಗಳ ನಂಬಿಕೆಯ ಆಚರಣೆಯಾಗಿದೆ. ಯಕ್ಷಗಾನ, ನಾಟಕ, ಕೋಲ, ನೇಮ, ನಾಗಮಂಡಲ, ದೇವಸ್ಥಾನ ಜಾತ್ರೆ ಇವೆಲ್ಲವೂ ಆಚರಣೆಗಳು ಮಾತ್ರವಲ್ಲದೆ ಅದರಲ್ಲಿರುವ ಧಾರ್ಮಿಕತೆ, ಮೂಲನಂಬಿಕೆಗಳು ಜನಜೀವನದೊಂದಿಗೆ ಬೆಸೆದುಕೊಂಡಿದೆ. ಅಲ್ಲದೆ ಕಲೆ ಹಾಗು ಸಂಸ್ಕೃತಿಗೆ ವಿಶೇಷವಾಗಿ ಪ್ರೋತ್ಸಾಹ ಸಿಕ್ಕಿ ಕಲಾ ಪರಂಪರೆಗೆ ಆರ್ಥಿಕ ಆಶ್ರಯವು ಆಗಿದ್ದು ಅದರಿಂದ ಕಲೆ ಕಲಾವಿದರು ಬದುಕಿ ಬೆಳೆಯುತ್ತಿದ್ದಾರೆ.ಕರಾವಳಿಯಲ್ಲಿ ಹತ್ತಾರು ಯಕ್ಷಗಾನ ಮೇಳಗಳು, ನೂರಾರು ನಾಟಕ ತಂಡಗಳು ಸಾವಿರಾರು ಕಲಾವಿದರು, ಹಿಮ್ಮೇಳದವರು, ಭಾಗವತರು, ತಂತ್ರಜ್ಞರು, ರಂಗಸಜ್ಜಿಕೆ, ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಅಲ್ಲದೆ ಹೂವಿನ ವ್ಯಾಪಾರದಿಂದ ಹಿಡಿದು ದ್ವನಿವರ್ಧಕ, ಶಾಮಿಯಾನ, ಜಾತ್ರಾ ವ್ಯಾಪಾರ ಹೀಗೆ ಈ ಉತ್ಸವ ಆಚರಣೆಗಳನ್ನೇ ನಂಬಿಕೊಂಡು ಅವೆಷ್ಟೋ ಜನರು ಜೀವನ ನಡೆಸುತ್ತಿದ್ದಾರೆ. ಆದರೆ ಕಾನೂನಿನ ನೆಪದಲ್ಲಿ ರಾತ್ರಿ 10 ಗಂಟೆಯ ನಂತರ ದ್ವನಿವರ್ಧಕ ಬಳಕೆ ಮತ್ತು ಸಮಯದ ಮಿತಿಯನ್ನು ನಿರ್ಬಂಧಿಸಿರುವುದು ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯ ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಿರುವುದು, ಧ್ವನಿವರ್ಧಕ ವಸ್ತುಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಿರುವುದು ಕೂಡ ಕಂಡು ಬಂದಿರುತ್ತದೆ. ಹಾಗೆ ಯಕ್ಷಗಾನವನ್ನು ಸ್ಥಗಿತಗೊಳಿಸಿರುವುದು ಕೂಡ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು ಆಕ್ರೋಶಕ್ಕೂ ಕೂಡ ಕಾರಣವಾಗಿದೆ.

ಹಾಗಾಗಿ ಕರಾವಳಿಯ ಧಾರ್ಮಿಕ ಸಾಂಸ್ಕೃತಿಕ ವೈಭವ ಉಳಿಯುವುದರ ಜೊತೆಗೆ ಇದನ್ನು ನಂಬಿಕೊಂಡು ಬದುಕುತ್ತಿರುವವರ ಸಾವಿರಾರು ಕುಟುಂಬಗಳು ಜೀವನ ನಡೆಸಬೇಕೆಂಬ ಉದ್ದೇಶದಿಂದ ಸೆಪ್ಟೆಂಬರ್ 09 2025 ರಂದು ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಮಂಗಳೂರು ಕದ್ರಿ ಪಾರ್ಕ್ ಬಳಿ ಗೋರಕ್ಷ ಜ್ಞಾನ ಮಂದಿರದಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯಲಿದೆ ವಿಶ್ವ ಹಿಂದ್ ಪರಿಷತ್ ನ ಪ್ರಮುಖರು ತಿಳಿಸಿದ್ದಾರೆ. ನಗರದ ವಿಶ್ವಶ್ರೀಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿಧ ಸಂಘಟನೆಯ ಪ್ರಮುಖರು, ವಿಶ್ವ ಹಿಂದೂ ಪರಿಷತ್ತಿನ ಸಹಕಾರದಿಂದ 01 ಸೆಪ್ಟೆಂಬರ್ 2025 ರಂದು ಸೋಮವಾರ ಮಂಗಳೂರು ಬಾಲಂ ಭಟ್ ಹಾಲ್ ನಲ್ಲಿ ಸಮಾಲೋಚನಾ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಂಘಟಿತವಾಗಿ ಜನಾಗ್ರಹ ಸಭೆ, ಕಾನೂನು ಹೋರಾಟ, ಜನಪ್ರತಿನಿಧಿಗಳ ಮುಖಾಂತರ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಒತ್ತಡ ತರುವುದರ ಮೂಲಕ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಆಗ್ರಹಿಸುವುದು, ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವಂತಹದ್ದು ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ರಚಿಸಿ ಆ ಸಮಿತಿಯ ಮೂಲಕ ನಿರ್ಣಯ ತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್ 09 ರಂದು ನಡೆಯುವ ನಡೆಯುವ ಜನಾಗ್ರಹ ಸಭೆಗೆ ಸರ್ವ ಹಿಂದೂ ಸಂಘಟನೆಗಳ ಒಕ್ಕೂಟ, ಸರ್ವ ಯಕ್ಷಗಾನ ಕಲಾವಿದರ ಒಕ್ಕೂಟ, ರಂಗಭೂಮಿ ಕಲಾವಿದರ ಒಕ್ಕೂಟ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾಸಂಘ, ಫ್ಲವ‌ರ್ ಡೆಕೋರೇಷನ್ ಮಾಲಕರ ಸಂಘ, ಕೊಂಕಣಿ ನಾಟಕ ಸಭಾ, ತುಳು ನಾಟಕ ಕಲಾವಿದರ ಒಕ್ಕೂಟ, ನಾಟಕ ಸಂಗೀತ ನಿರ್ದೇಶಕರ ಒಕ್ಕೂಟ, ಕರಾವಳಿ ದೈವಾರಾದಕರ ಮತ್ತುದೈವನರ್ತಕರ ಒಕ್ಕೂಟ, ಜಾನಪದ ಪರಿಷದ್ ದಕ ಜಿಲ್ಲೆ, ಶಾಮಿಯಾನ ಮಾಲಕರ ಸಂಘ,ಎಲ್ಲಾ ಗಣೇಶೋತ್ಸವ ಶಾರದೋತ್ಸವ ಕೃಷ್ಣ ಜನ್ಮಾಷ್ಟಮಿ ಸಮಿತಿಗಳು ದಕ್ಷಿಣ ಕನ್ನಡ ಜಿಲ್ಲೆ, ಕೊಂಕಣಿ ರಂಗ ಕಲಾವಿದರು ಬೆಂಬಲ ಸೂಚಿಸಿದ್ದು, ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಈ ಬೃಹತ್ ಜನಾಗ್ರಹ ಸಭೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಬಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಚ್ ಕೆ ಪುರುಷೋತ್ತಮ, ಶಿವಾನಂದ್‌ ಮೆಂಡನ್, ಡಾ .ದೇವದಾಸ್ ಕಾಪಿಕಾಡ್, ಪಟ್ಲಾ ಸತೀಶ್ ಶೆಟ್ಟಿ, ಲ. ಕಿಶೋರ್ ಡಿ ಶೆಟ್ಟಿ,ಶರಣ್ ಪಂಪುವೆಲ್, ಪಮ್ಮಿ ಕೊಡಿಯಾಲ್ ಬೈಲ್‌, ಧನರಾಜ್ ಶೆಟ್ಟಿ, ಲಕ್ಷ್ಮಣ್ ಕುಮಾ‌ರ್ ಮಲ್ಲೂರು, ದಯಾನಂದ್ ಕತ್ತಲ್ ಸಾರ್, ಮಧು ಬಂಗೇರ ಕಲ್ಲಡ್ಕ,ಕೃಷ್ಣ ಮಂಜೇಶ್ವರ, ತುಷಾರ್ ಸುರೇಶ್, ರಾಜೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ