image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬುರುಡೆ ಕೇಸ್ ಗೆ ಬಿಗ್ ಟ್ವಿಸ್ಟ್ : ರೆಡ್ಡಿ ವಿರುದ್ಧ ಕೇಸ್ ಹಾಕುವುದರೊಂದಿಗೆ ಅಣ್ಣಾಮಲೈ ಎಳೆದು ತಂದ ಶಶಿಕಾಂತ್ ಸೆಂಥಿಲ್!

ಬುರುಡೆ ಕೇಸ್ ಗೆ ಬಿಗ್ ಟ್ವಿಸ್ಟ್ : ರೆಡ್ಡಿ ವಿರುದ್ಧ ಕೇಸ್ ಹಾಕುವುದರೊಂದಿಗೆ ಅಣ್ಣಾಮಲೈ ಎಳೆದು ತಂದ ಶಶಿಕಾಂತ್ ಸೆಂಥಿಲ್!

ಬೆಳ್ತಂಗಡಿ : ಶಾಸಕ ಜನಾರ್ಧನ ರೆಡ್ಡಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಉತ್ತರಿಸಲು ಸಂಸದ ಸಸಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ರೆಡ್ಡಿ ಅವರು ಧರ್ಮಸ್ಥಳದ ವಿರುದ್ಧ ಸೆಂಥಿಲ್ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಂಸದ ಸಸಿಕಾಂತ್ ಸೆಂಥಿಲ್ ಅವರು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಂಕೀರ್ಣದಲ್ಲಿರುವ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದರು. ಧರ್ಮಸ್ಥಳದ ವಿರೋಧವಾಗಿ ಸೆಂಥಿಲ್ ಕೆಲಸ ಮಾಡಿದ್ದಾರೆ ಎಂಬ ರೆಡ್ಡಿ ಆರೋಪ ಹಿನ್ನೆಲೆ ಈ ದೂರು ನೀಡಿದ್ದು, ತಮಿಳುನಾಡಿನಲ್ಲಿ ಇನ್ನೊಬ್ಬ ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ ಅವರ ಬಗ್ಗೆ ಯಾಕೆ ಯಾರೂ ಮಾತನಾಡಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕ ಅಣ್ಣಾಮಲೈ ಬಗ್ಗೆ ಮಾತನಾಡಿದ್ದಾರೆ.

ದೂರು ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೆಂಥಿಲ್, "ಇತ್ತೀಚೆಗೆ ಶಾಸಕ ಜನಾರ್ಧನ ರೆಡ್ಡಿ ಅವರು ನನ್ನ ಕುರಿತು ವಾಟ್ಸಪ್ ಆಧಾರಿತ ತಪ್ಪು ಆರೋಪಗಳನ್ನು ಮಾಡಿದ್ದಾರೆ. 'ಸೆಂಥಿಲ್‌ ಮಾಸ್ಟರ್‌ಮೈಂಡ್, ಸ್ಕ್ರಿಪ್ಟ್ ರೈಟರ್' ಎಂದು ಸುಳ್ಳು ಪ್ರಚಾರ ನಡೆಸಿದ್ದಾರೆ. ಮೊದಲಿಗೆ ಈ ರೀತಿಯ ಅಸಂಬದ್ಧ ಮಾತುಗಳಿಗೆ ಪ್ರತಿಕ್ರಿಯಿಸಬೇಕೆಂದು ನನಗೆ ತೋಚಲಿಲ್ಲ. ನಾನು ಸಂಸದನಾಗಿ ಅನೇಕ ಮಹತ್ವದ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅದನ್ನು ಲಘುವಾಗಿ ತೆಗೆದುಕೊಂಡಿದ್ದೆ. ಆದರೆ ಪ್ರತಿದಿನವೂ ಹೊಸ ಕಥೆಯನ್ನು ಬಲವಂತವಾಗಿ ಸೃಷ್ಟಿಸಿ ನನ್ನ ವಿರುದ್ಧ ಪ್ರಚಾರ ನಡೆಸುತ್ತಿರುವುದರಿಂದ, ಈಗ ವಿಷಯಕ್ಕೆ ಉತ್ತರಿಸುವ ಸಮಯ ಬಂದಿದೆ ಎಂದು ಹೇಳಿದರು. ಸೆಂಥಿಲ್ ತಮ್ಮ ವಿರುದ್ಧ ಮಾಡಲಾದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾ, "ಇದು ರಾಜಕೀಯ ಪ್ರೇರಿತ ಸುಳ್ಳು ಆರೋಪ. ಜನಾರ್ಧನ ರೆಡ್ಡಿ ಅವರೇ ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದವರು. ಇಂತಹ ವ್ಯಕ್ತಿಯಿಂದ ಬಂದಿರುವ ಆರೋಪವನ್ನು ಹಾಗೇ ಬಿಟ್ಟರೆ ಅದು ದೊಡ್ಡ ಸಮಸ್ಯೆಯಾಗುತ್ತದೆ. ಆದ್ದರಿಂದ ನಾನು ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಅವರು ಮಾಡಿದ ಆರೋಪಕ್ಕೆ ಯಾವ ಆದಾರವಿದೆ ಎಂಬುದನ್ನು ನ್ಯಾಯಾಲಯಕ್ಕೆ ಬಂದು ಸ್ಪಷ್ಟಪಡಿಸಲಿ," ಎಂದರು.

ನಾನು ಕರ್ನಾಟಕಕ್ಕೆ ಅಪರಿಚಿತನಲ್ಲ. ಇಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಯಾವ ರೀತಿಯಲ್ಲಿ ಕೆಲಸ ಮಾಡಿದ್ದೇನೆಂದು ಜನರೇ ಸಾಕ್ಷಿ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ನನ್ನ ಇಮೇಜ್ ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆಂಥಿಲ್ ಅವರು ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡುತ್ತಾ, "ನಾನು ದೇಶದಾದ್ಯಂತ ಬಲಪಂಥೀಯ ರಾಜಕೀಯವನ್ನು ಎದುರಿಸುತ್ತಾ ಬಂದಿದ್ದೇನೆ. ಅದರ ನಿಮಿತ್ತ ನನ್ನ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದೇನೆ. ಆ ವಿಚಾರವನ್ನೇ ನಾನು ರಾಜೀನಾಮೆ ಪತ್ರದಲ್ಲೂ ದಾಖಲಿಸಿದ್ದೇನೆ. ನಾನು ಯಾವುದೇ ಅಡಗಿಸಿಕೊಡುವ, ಮರೆಮಾಚುವ ಕೆಲಸ ಮಾಡುವುದಿಲ್ಲ," ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ತಮಗೆ 'ಬುರುಡೆ' ಕೊಟ್ಟಿದ್ದಾರೆ ಎಂಬ ರೆಡ್ಡಿಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ನನಗೆ ದೆಹಲಿಯಲ್ಲಿ ಸರ್ಕಾರದಿಂದ ಮನೆ ನೀಡಲೇ ಇಲ್ಲ. ಈ ಸರ್ಕಾರಕ್ಕೆ ಒಂದು ವರ್ಷವಾದರೂ ನನಗೆ ಇನ್ನೂ ಅಧಿಕೃತ ವಸತಿ ಸೌಲಭ್ಯ ಸಿಕ್ಕಿಲ್ಲ. ನಾನು ಇನ್ನೂ ತಮಿಳುನಾಡಿನ ನನ್ನ ಮನೆದಲ್ಲೇ ವಾಸಿಸುತ್ತಿದ್ದೇನೆ. ಅಲ್ಲಿ ಬುರುಡೆ ಸಿಗುವುದು ಎಲ್ಲಿಂದ? ಈ ವಿಚಾರವನ್ನು ಜನಾರ್ಧನ ರೆಡ್ಡಿ ಅವರಿಗೆ ಗೊತ್ತಿರಬೇಕು," ಎಂದು ಪ್ರಶ್ನಿಸಿದರು. 

ತಮಿಳುನಾಡಿನಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಅವರ ಹೆಸರು ಯಾಕೆ ಹೊರಬರಲಿಲ್ಲ? ನನ್ನ ಹೆಸರನ್ನೇ ಏಕೆ ಹಾಳು ಮಾಡಲು ಪ್ರಯತ್ನ ಮಾಡಲಾಗುತ್ತಿದೆ? ಇದು ನನ್ನ ರಾಜಕೀಯ ಬದುಕು ಹಾಗೂ ಸಾರ್ವಜನಿಕ ಇಮೇಜ್ ಹಾಳು ಮಾಡುವ ಪ್ರಯತ್ನವೆಂದು ನನಗೆ ಸ್ಪಷ್ಟವಾಗಿದೆ," ಎಂದು ಆರೋಪಿಸಿದರು. ಧರ್ಮಸ್ಥಳ ಹಾಗೂ ಇತರ ವಿಷಯಗಳ ಬಗ್ಗೆ ರೆಡ್ಡಿ ನೀಡಿರುವ ಹೇಳಿಕೆಗಳ ಕುರಿತು ಮಾತನಾಡಿ, "ಅದರ ಕುರಿತು ಈಗಾಗಲೇ ಕ್ರಿಮಿನಲ್ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಮಧ್ಯಂತರದಲ್ಲಿ ಯಾರಿಗೂ ಮಾತನಾಡಲು ಅಧಿಕಾರವಿಲ್ಲ. ಆದರೆ ನನ್ನ ಹೆಸರನ್ನು ಆ ಪ್ರಕರಣಕ್ಕೆ ಅನಗತ್ಯವಾಗಿ ಎಳೆದಿರುವುದರಿಂದಲೇ ನಾನು ಪ್ರತಿಕ್ರಿಯಿಸುತ್ತಿದ್ದೇನೆ. ಸುಳ್ಳು, ಆಧಾರರಹಿತ ಆರೋಪ ಮಾಡಿದ ಕಾರಣಕ್ಕೆ ನಾನು ಕೋರ್ಟ್ ಮೊರೆ ಹೋಗಿದ್ದೇನೆ," ಎಂದು ತಿಳಿಸಿದರು. ಧರ್ಮಸ್ಥಳದ ವಿಚಾರವಾಗಿ ದೂರು ದಾಖಲಾಗಿದೆ. ತನಿಖೆ ನಡೆದ ಬಳಿಕ ನಿಜ ಗೊತ್ತಾಗುತ್ತೆ. ಅದರ ಬಗ್ಗೆ ನಾನು ಉತ್ತರ ನೀಡಲು ಆಗಲ್ಲ. ನಾನು ಬೆಳ್ಳಾರಿಯಲ್ಲಿ ಕೆಲಸ ಮಾಡಿದ್ದೆ. ಆದ್ರೆ ನಾನು ಅಲ್ಲಿ ಪೋಸ್ಟಿಂಗ್ ಆದಾಗ ಜನಾರ್ದನ ರೆಡ್ಡಿ ಅರೆಸ್ಟ್ ಆಗಿದ್ರು. ಕರ್ನಾಟಕದ ಸಂಪತ್ತನ್ನು ಊಟಿ ಮಾಡಿದ ವ್ಯಕ್ತಿ. ನೋಟು ಅಮಾನ್ಯವಾಗಿದ್ದವಾಗಿದ್ದಾಗ 500 ಕೋಟಿ ಖರ್ಚು ಮಾಡಿದ್ರು, ಜನಾರ್ದನ ರೆಡ್ಡಿ ಲೈಮ್ ಲೈಟ್ ಗೆ ಬರಲು ನನ್ನ ವಿರುದ್ಧ ಆರೋಪ ಮಾಡಲಾಗಿದೆ. ಅಥವಾ ಯಾರದ್ದೋ ಸೂಚನೆ ಮೇರೆಗೆ ಆರೋಪ ಮಾಡಲಾಗಿದೆ ಎಂದು ಆರೋಪಿಸಿದರು.

Category
ಕರಾವಳಿ ತರಂಗಿಣಿ